ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಆಗಿ ಡಿಕೆ.ಶಿವಕುಮಾರ್ ಅವರು ಎಸ್‌ಐಟಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಆದರೆ, ಈಗ ಧರ್ಮಸ್ಥಳ ವಿಷಯದಲ್ಲಿ ಪಿತೂರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಧರ್ಮಸ್ಥಳ ಬಿಜೆಪಿಯ ಆಸ್ತಿ ಎಂದು ನಾವು ಎಲ್ಲಿ ಹೇಳಿದ್ದೇವೆ? ನಿಮ್ಮ ಸರ್ಕಾರ ಹಿಂದೂ ದೇವಾಲಯಗಳು ಮತ್ತು ದೇವಾಲಯಗಳನ್ನು ನಾಶಮಾಡುವ ಕೆಲಸವನ್ನು ಮಾಡಿದ್ದರೆ ನಾವು ಮೌನವಾಗಿರಬೇಕೇ? ಎಂದು ಪ್ರಶ್ನಿಸಿದರು.
ನೀವು ಇಡೀ ಹಿಂದೂ ಸಮಾಜದ ಆಸ್ತಿಯ ಮೇಲೆ ಕೈ ಹಾಕುತ್ತಿದ್ದೀರಿ. ವಿವಿಧ ದೇವಾಲಯಗಳಿಂದ ಹಣವನ್ನು ಕದಿಯಲು ಪ್ರಯತ್ನಿಸಿದ್ದೀರಿ. ಬಾಹುಬಲಿ ಬೆಟ್ಟವನ್ನು ಅಗೆಯಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಧರ್ಮಸ್ಥಳ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಧರ್ಮದ ಪರವಾಗಿ, ಪವಿತ್ರ ಸ್ಥಳದ ಪರವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದರು.
ಯಾರೋ ನೂರಾರು ಅನಾಮಧೇಯ ಶವಗಳನ್ನು ಹೂತುಹಾಕಿದ್ದೇನೆಂದು ಹೇಳಿದ್ದು, ಇದನ್ನು ನಂಬಿ ಸರ್ಕಾರ ಬಾಹುಬಲಿ ಬೆಟ್ಟವನ್ನು ಅಗೆದಿದೆ. ನಾಳೆ ಇನ್ನಾರೋ ವ್ಯಕ್ತಿ ಶವಗಳನ್ನು ದರ್ಗಾದಲ್ಲಿ ಹೂತುಹಾಕಲಾಗಿದೆ ಎಂದು ಹೇಳುತ್ತಾನೆ. ಅಲ್ಲಿಯೂ ಅಗೆಯುತ್ತೀರಾ? ಕೆಲವರು ಧರ್ಮಸ್ಥಳ ಶ್ರೀಕ್ಷೇತ್ರದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ನೀವು ಅವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವಿಲ್ಲ ಎನ್ನುವ ಕಾಂಗ್ರೆಸ್‌ನವರು ಅಯೋಗ್ಯರು. ಅವರು ಆಡಳಿತ ನಡೆಸಲು ಯೋಗ್ಯರಲ್ಲ ಎಂದು ಕಿಡಿ ಕಾರಿದರು.
ಮೂಲ ಕಾಂಗ್ರೆಸ್ ಅನ್ನು ಕಬಳಿಸಿಕೊಂಡಿದ್ದಾರೆ. ಈಗಿರುವವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಅಂದರೆ ನೀವೇನಾ? ಇದೇನಾ? ಎನ್ನುವಂತಾಗಿದೆ ಎಂದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ ಅದ್ಯಾವ ರೀತಿ ನಡೆಸಿಕೊಂಡಿದೆ ಎಂಬುದು ಗೊತ್ತಿದೆ. ದೇಶಕ್ಕೆ ಇಂದಿರಾ ಗಾಂಧಿಗಿಂತ ಹತ್ತು ಪಟ್ಟು ಹೆಚ್ಚು ತ್ಯಾಗ ಮಾಡಿದ್ದಾರೆ ನೇತಾಜಿ. ಆದರೆ, ಸರ್ಕಾರಿ ಯೋಜನೆಗಳಿಗೆ ಇಂಥ ಎಷ್ಟು ಜನರ ಹೆಸರು ಇಟ್ಟಿದ್ದೀರಿ? ಬರೀ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿಟ್ಟಿದ್ದೀರಿ ಎಂದು ಕುಟುಕಿದರು.