ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನಿದೆ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಇದು ಸ್ಥಳೀಯ ಮಟ್ಟದಲ್ಲೇ ಇದ್ದು, ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಕ್ಷದೊಳಗೆ ಪರಿಹರಿಸಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿಲ್ಲ, ಇದು ಕೇವಲ "ಮಾಧ್ಯಮಗಳ ಸೃಷ್ಟಿ" ಎಂದರು.
"ಪರಿಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನೀವು(ಮಾಧ್ಯಮ) ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೀರಿ. ನಾನು ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಖರ್ಗೆ ಅವರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ..." ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ನೀವು ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚಿಂತಿಸಬೇಡಿ ಎಂದು ಡಿಸಿಎಂ ಮಾಧ್ಯಮಗಳಿಗೆ ಸಲಹೆ ನೀಡಿದರು.
ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಎಲ್ಲರೂ ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ "ಹೈಕಮಾಂಡ್ ಮೇಲೆ ಆರೋಪ ಹೊರಿಸುವುದು ಎಷ್ಟು ಸರಿ?". ಹೈಕಮಾಂಡ್ ಅನ್ನು ದೂಷಿಸುವ ಬದಲು ಸ್ಥಳೀಯ ನಾಯಕರು ಆಂತರಿಕ ಗೊಂದಲವನ್ನು ಸರಿಪಡಿಸಿಕೊಳ್ಳಬೇಕು ಎಂದು ಖರ್ಗೆ ಅವರು ನಿನ್ನೆ ತಾಕೀತು ಮಾಡಿದ್ದರು.