ಬೆಂಗಳೂರು: ರಾಜಣ್ಣ ಅವರ ಹೇಳಿಕೆ ಸರಿ ಇದೆ. ನನಗೆ ಕೊಂಬು ಇಲ್ಲ. ನಾನು ಒಬ್ಬ ಕಾರ್ಯಕರ್ತ ಅಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಹೇಳಿದರು.
ಬೆಂಗಳೂರಿನಲ್ಲಿ ಸಚಿವ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಯಾಧ್ಯಕ್ಷನಾಗಿ ನಾನು ಇದನ್ನು ಬೆಳೆಸಿಕೊಂಡು ಹೋಗುವುದಿಲ್ಲ. ಆದರೆ ನಾನು ಏನು ಹೇಳಬೇಕೋ ಹೇಳಿದ್ದೇನೆ. ನಾನು ಯಾರದೋ ಹೆಸರು ಹೇಳಿಲ್ಲ. ರಾಜಣ್ಣ ಅವರು ಹಿರಿಯ ನಾಯಕರು ಅವರ ಹೇಳಿಕೆಯನ್ನು ಗೌರವಿಸುತ್ತೇನೆ ಎಂದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ಪಕ್ಷದಲ್ಲಿ ಶಿಸ್ತು ಇದೆಯಾ ಅಂದರೆ ಪಕ್ಷದಲ್ಲಿ ಇವೆಲ್ಲಾ ಸರ್ವೇಸಾಮಾನ್ಯ. ನಾವು ಮಿಲಿಟರಿಯಲ್ಲಿ ಇಲ್ಲ, ಮಿಲಿಟರಿ ಆಡಳಿತ ಇಲ್ಲ. ಅವರ ಮಾತನ್ನು ಗೌರವಿಸುತ್ತೇನೆ. 25 ವರ್ಷದ ಹಿಂದೆ ನನ್ನ 25ನೇ ವಯಸ್ಸಿನಲ್ಲಿ ಕಾರ್ಪೊರೇಷನ್‌ಗೆ ನಿಂತಿದ್ದೇನೆ. ಆ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ಅವರ ಹೇಳಿಕೆಯನ್ನು ನಾನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. ಹಿರಿಯರು 50 ವರ್ಷ ಸೇವೆ ಸಲ್ಲಿಸಿದ್ದಾರೆ. ಹಿರಿಯರು ಹೇಳಿದ್ದಾರೆ ಎಂದುಕೊಳ್ಳುತ್ತೇನೆ ಎಂದು ಹೇಳಿದರು.
ಕ್ರಿಯೆಗೆ ಪ್ರತಿಕ್ರಿಯೆ ಕೊಡೋದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಅವರ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಅವರು ಏನು ಹೇಳಿದರೂ ನನ್ನ ಒಳ್ಳೆಯದಕ್ಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಲ್ಲ. ರಾಜಣ್ಣ ಹೇಳಿಕೆಯನ್ನು ನಾನು ಮುಂದುವರಿಸಲು ಹೋಗಲ್ಲ ಎಂದು ತಿಳಿಸಿದರು.
ಈ ಸ್ಥಾನಕ್ಕೆ ಘನತೆ ತರಬೇಕು ಅನ್ನುವ ಕಾರಣಕ್ಕೆ ಏನು ಮಾತನಾಡಲ್ಲ. ರಾಜಣ್ಣ ಅವರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಅದನ್ನು ನೋಡಿಕೊಂಡು ಅನುಸರಿಸಿಕೊಂಡು ಹೋಗಬೇಕು. ನನ್ನಿಂದ ಪಕ್ಷಕ್ಕಾಗಲೀ, ನಾಯಕರಿಗಾಗಲೀ, ಪಕ್ಷದ ಕಾರ್ಯಕರ್ತರಿಗಾಗಲೀ ಚಂದ್ರಶೇಖರ್ ಈ ರೀತಿ ಮಾಡಬಾರದಿತ್ತು ಎನ್ನುವ ಭಾವನೆ ಬರಬಾರದು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಇದನ್ನು ಗೌರವಿಸುತ್ತೇನೆ ಎಂದು ನುಡಿದರು.
ಜಿ.ಸಿ. ಚಂದ್ರಶೇಖರ್ ಯಾರು, ಅವರ ಮಾತಿಗೆ ಇಷ್ಟು ಮನ್ನಣೆನಾ?. ಕೆಪಿಸಿಸಿ ಕಾರ್ಯಾಧ್ಯಕ್ಷ ಅಂದರೆ ಎರಡು ಕೊಂಬು ಇವೆಯಾ? ಶಿಶುಪಾಲ ಅವರೇ, ನಾನು ಶ್ರೀಕೃಷ್ಣ. ನೋಡ್ರೀ, ದೆ ಆರ್ ಆಲ್ ಲಯಾಬಿಲಿಟಿ ಫಾರ್ ಪಾರ್ಟಿ. ಅವರ ಶಕ್ತಿ ಏನಿದೆ?. ಶಕ್ತಿ ಮೀರಿ ಅಧಿಕಾರ ಅನುಭವಿಸುತ್ತಿದ್ದಾರೆ. ಎರಡು ಬಾರಿ ಎಂಪಿ ಆಗಿ ಪಾರ್ಟಿಗೆ ಏನ್ ಶಕ್ತಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.