ಹುಬ್ಬಳ್ಳಿ: ರಾಜ್ಯದ ಆರ್ಥಿಕ ಸ್ಥಿತಿ ದಯನೀಯ ಸ್ಥಿತಿಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದು ಸಲಹೆ ನೀಡಿದರೆ, ಆದರೆ, ಅದಕ್ಕೂ ಅವರಿಗೆ ಆಪತ್ತಿದೆ ಎಂದರೆ ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ. ನಾವು ರಾಜ್ಯದ ಬಜೆಟ್ ಬಗ್ಗೆ ಮಾತನಾಡಿದರೆ, ಅವರು ಕೇಂದ್ರದ ಬಜೆಟ್ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಸರ್ಕಾರ ರಾಜ್ಯದ ಬಜೆಟ್ ಬಗ್ಗೆ ಸಂಪೂರ್ಣ ವಿವರ ಕೊಡಬೇಕು. ಕಳೆದ ವರ್ಷ ಯಾವುದಕ್ಕೆ ಎಷ್ಟು ಹಣ ಇಟ್ಟಿದ್ದರು, ಎಷ್ಟು ಖರ್ಚಾಗಿದೆ ಎನ್ನುವುದನ್ನು ಮಾಹಿತಿ ನೀಡಬೇಕು. ನಾನಿದ್ದಾಗ ಪೂರಕ ಬಜೆಟ್ ಮಂಡನೆ ಮಾಡಿದ್ದೆ, ಇವರು ಬಂದ ಮೇಲೆ ಎರಡು ವರ್ಷದಿಂದಲೂ ಕೊರತೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರವಿದ್ದಾಗ 77 ಸಾವಿರ ಕೋಟಿ ರೂ. ಸಾಲ ಪಡೆದು ಅದರಲ್ಲಿ ಅತಿ ಹೆಚ್ಚು ಬಂಡವಾಳ ವೆಚ್ಚ ಮಾಡುತ್ತಿದ್ದೇವು. ಕಾಂಗ್ರೆಸ್ ಅವಧಿಯಲ್ಲಿ ಬಂಡವಾಳ ವೆಚ್ಚ ಹೆಚ್ಚಾಗಿಲ್ಲ ಸಾಲ ಹೆಚ್ಚಾಗಿದೆ. 1.5 ಲಕ್ಷ ಕೋಟಿ ರೂ. ಸಾಲ ಎರಡೂ ವರ್ಷ ಮಾಡಿದ್ದಾರೆ. ಕಳೆದ ವರ್ಷ 15 ಸಾವಿರ ಕೋಟಿ ರೂ. ಸಾಲ ಹೆಚ್ಚುವರಿಯಾಗಿ ಮಾಡಿದ್ದಾರೆ ಎಂದು ದೂರಿದರು.
ಸಾಲದ ಶೂಲಕ್ಕೆ ತಳ್ಳುತ್ತಿರುವ ಬಗ್ಗೆ ಕೇಳಿದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅವರದೇ ನೆಚ್ಚಿನ ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದರೆ ಅವರ ಸರಕಾರದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂಬುದಕ್ಕೆ ಅದೇ ಉತ್ತರ ಎಂದು ತಿಳಿಸಿದರು.
ಎಸ್ಸಿಪಿ ಟಿಎಸ್‍ಪಿ ಹಣ ಕಳೆದ ಎರಡು ವರ್ಷಗಳಿಂದ ದುರ್ಬಳಕೆ ಆಗುತ್ತಿದೆ. ಎಸ್ಸಿಪಿ ಟಿಎಸ್‍ಪಿಗೆ ಬಜೆಟ್ ನಲ್ಲಿ ಮೀಸಲಿರಿಸಿದ್ದ 25 ಸಾವಿರ ಕೋಟಿ ರೂ.ಗಳು ಬೇರೆ ಬೇರೆ ಯೋಜನೆಗೆ ಬಳಕೆ ಆಗಿದೆ. ಅಭಿವೃದ್ಧಿಗೆ ಹಣ ಕೊರತೆ ಆಗಿದೆ. ಇದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಗೆ ಬರುವ ಹಣ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಓಬಿಸಿ, ಎಸ್ ಸಿ. ಎಸ್ ಟಿ ಹಾಗೂ ಇತರ ಜನಸಾಮಾನ್ಯರ ಕಲ್ಯಾಣ ಅನುದಾನ ಬಿಡುಗಡೆ ಆಗಿಲ್ಲ. ವಾಲ್ಮೀಕಿ ನಿಗಮದ ಹಗರಣ ಆದ ನಂತರ ಆ ಇಲಾಖೆಯಲ್ಲಿ ಏನು ಆಗುತ್ತಿದೆ. ಇಲಾಖೆಯ ಅನುದಾನ ಏನಾಗಿದೆ. ಯಾವ ಉದ್ದೇಶಕ್ಕೆ ಬಳಕೆ ಆಗಿದೆ. ಎಷ್ಟು ಉಳಿದಿದೆ, ಎಷ್ಟು ಹಣ ಬಳಕೆ ಆಗಿದೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.