ಬೆಂಗಳೂರು: ಸರ್ಕಾರ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯಲು ಸಾಧ್ಯವಿಲ್ಲ. ಗುತ್ತಿಗೆದಾರ ಸಚಿನ್ ಪ್ರಕರಣದ ಸಂಬಂಧ ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಸಚಿನ್ ಕುಟುಂಬಕ್ಕೂ ಭರವಸೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿನ್ ಪಾಂಚಾಳ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ. ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯಲು ನಮಗೆ ಸಾಧ್ಯವಿಲ್ಲ. ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಕುಟುಂಬಕ್ಕೆ ಭರವಸೆ ನೀಡಿದ್ದೇನೆ. ಸಿಐಡಿ ಪ್ರಾಥಮಿಕ ತನಿಖೆಯ ನಂತರ ಕೆಲವು ವಿಷಯಗಳು ಹೊರಬೀಳಲಿದ್ದು, ಅದನ್ನು ಕುಟುಂಬ ಸದಸ್ಯರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.
ಬಿಜೆಪಿಯವರಿಗೇಕೆ ಸಿಬಿಐ ಮೇಲೆ ಅಷ್ಟೊಂದು ಪ್ರೀತಿ. ಬಿಜೆಪಿಯ ಸ್ಕ್ರಿಪ್ಟ್ ಪ್ರಕಾರ ನಡೆಯಲು ನಮಗೆ ಸಾಧ್ಯವಿಲ್ಲ. ಒಂದು ಜೀವ ಕಳೆದು ಹೋಗಿದೆ, ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಸಚಿನ್ ಪಾಂಚಾಳ್ ಸಹೋದರಿ ಮೋದಿಯವರಿಗೆ ಪತ್ರ ಬರೆಯುತ್ತೇನೆಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿಐಡಿ ತನಿಖೆ ಪ್ರಾರಂಭವಾಗಿ ಎರಡು ದಿನಗಳಾಗಿವೆ. ಈಗಾಗಲೇ ಅವರು ಸ್ಥಳ ಪರಿಶೀಲನೆ (ಮಹಜರ್) ಮಾಡಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆಸುವುದು ಸರ್ಕಾರದ ಕೆಲಸ ಎಂದರು.
ಗಂಗಾ ಕಲ್ಯಾಣ ಹಗರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ರಾ?. ಪಿಎಸ್ಐ ಹಗರಣವನ್ನು ಕೊಟ್ಟಿದ್ರಾ?. ಇವರ ಅವಧಿಯಲ್ಲಿ ಎಷ್ಟು ಕೇಸ್ಗಳನ್ನು ಸಿಬಿಐಗೆ ಕೊಟ್ಟಿದ್ದಾರೆ?. ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಎಂದು ಸಿಬಿಐನವರೇ ಹೇಳಿದ್ದಾರೆ. ಇವರು ಹೇಳಿದಂತೆ ಮಾಡುವುದಕ್ಕೆ ಇರುವುದಾ ನಾವು?. ಅವರ ಸ್ಕ್ರಿಫ್ಟ್ಗೆ ನಾವು ಕುಣಿಯುವುದಕ್ಕೆ ಆಗುತ್ತಾ?. ಪ್ರತಿಪಕ್ಷದಲ್ಲಿ ಇದ್ದವರು ಜವಾಬ್ದಾರಿಯುತವಾಗಿ ಇರಬೇಕು ಎಂದು ಕಿಡಿಕಾರಿದರು.
ಸಚಿನ್ ಪಾಂಚಾಲ್ ಬಗ್ಗೆ ಮಾತಾಡಿರುತ್ತಿರುವ ಬಿಡೆಪಿಯವರು ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿತ್ತಾ? ಅವರಿಗೆ ಸಹಾಯ ಮಾಡಬೇಕಿತ್ತು. ವಿಜಯೇಂದ್ರ ಸಂತೋಷ್ ಮನೆಗೆ ಹೋಗಿದ್ದರಾ? ಪ್ರಕರಣದಲ್ಲಿ ರಾಜಕೀಯ ಬೆರೆಸದೇ ಪಾಂಚಾಳ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಇವರಲ್ಲಿ ಇರುವ ಹುಳುಕು ನಾವು ತಯಾರು ಮಾಡಿದ್ದಾ? ಕಲಬುರಗಿಯಲ್ಲಿ ಎಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ. ವಿಪಕ್ಷ ನಾಯಕ ಅಶೋಕ್ ಮಾತಾಡಿದ್ದು ಸಂಸ್ಕೃತಿಯೇ? ಸಿ.ಟಿ.ರವಿ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದನೆ ಮಾಡುತ್ತಾರೆ. ಮುನಿರತ್ನ ಜಾತಿ ನಿಂದನೆ ಮಾಡುತ್ತಾರೆ. ಇದೇನಾ ನಿಮ್ಮ ಸಂಸ್ಕೃತಿ? ಮಹಿಳೆಯರ ಮೇಲೆ, ಅಧಿಕಾರಿಗಳ ಮೇಲೆ ದರ್ಪ ತೋರುವುದು ನಿಮ್ಮ ಸಂಸ್ಕೃತಿಯೇ? ನನ್ನ ಬಗ್ಗೆ ಮಾತನಾಡುವಾಗ ನಾಲಿಗೆಗೆ ಲಗಾಮು ಇರಲಿ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.