ಬೆಂಗಳೂರು: ಸಿಎಂ ಸ್ಥಾನ ಸಧ್ಯಕ್ಕೆ ಖಾಲಿ ಇಲ್ಲ, ಹೀಗಾಗಿ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಪಕ್ಷದ ಶಿಸ್ತಿನ ಸಿಪಾಯಿಯಾಗಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮಾತಿಗೆ ಬದ್ಧರಾಗಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಕೂಗಿನ ನಡುವೆ ನಾನೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಹೇಳಿದ್ದರಲ್ಲಿ ತಪ್ಪೇನಿದೆ. ಮುಖ್ಯಮಂತ್ರಿಯಾಗಿರುವವರು ಮುಂದುವರಿಯುತ್ತೇನೆ ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ? ಅವರು ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಅವರನ್ನು ಸಿಎಂ ಮಾಡಿದೆ. ಅವರು ಸರ್ಕಾರ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆ ಏನು? ಎಂದು ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನ ಮುಂದೆ ಯಾವುದೇ ಆಯ್ಕೆ ಇಲ್ಲ, ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಅವರು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದಾರೆ, ಈಗಲೂ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹಿಂದೆಯೂ ಹೇಳಿದ್ದರು. ಈಗಲೂ ಹೇಳಿದ್ದಾರೆ. ಮುಂದೆಯೂ ಹೇಳುತ್ತಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನವನ್ನು ಪಾಲಿಸಿ ಶಿಸ್ತು ಕಾಪಾಡುವುದು ಅವರ ಕರ್ತವ್ಯ. ಹಾಗಾಗಿ ಅವರು ಕೆಲವು ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ” ಎಂದರು.
ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆಯನ್ನು ನೀವು ವ್ಯಕ್ತಪಡಿಸಿದ್ದೀರಿ ಎಂದು ಕೇಳಿದಾಗ, “ಆ ಭರವಸೆ ಇಂದೂ ಇದೆ, ನಾಳೆಯೂ ಇರುತ್ತದೆ. ನಂಬಿಕೆ ಎಂಬುದು ನಮ್ಮ ಜೀವನ ನಡೆಸಲು ಪ್ರೇರಣೆ. ನಂಬಿಕೆ ಇಲ್ಲದಿದ್ದರೆ ಜೀವನ ಮಾಡುವುದೇ ಕಷ್ಟವಾಗುತ್ತದೆ. ನನಗೆ ಈಗಲೂ ಆಸೆ ಇದೆ. ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೆಲವು ಭಾಗದ ಜನರು ವಿಶ್ವಾಸ ಇಟ್ಟು ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.
ಆದರೆ ಈಗ ಸಿಎಂ ಸೀಟು ಖಾಲಿ ಇಲ್ಲ” ಎಂದು ತಿಳಿಸಿದರು. ಖಂಡಿತವಾಗಿ ಯಾವುದಾದರೂ ಒಂದು ದಿನ ಪ್ರತಿಫಲ ಸಿಗಬೇಕು. ಸಿಕ್ಕೇ ಸಿಗುತ್ತದೆ. ಅವರು ಸಿಎಂ ಆಗುತ್ತಾರೋ ಇಲ್ಲವೋ ಎಂಬ ವಿಚಾರ ತೀರ್ಮಾನ ಮಾಡಲು ನಾನು ಸಣ್ಣವನು. ಈ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡಬೇಕು. ಸಧ್ಯಕ್ಕೆ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದಲ್ಲಿ ಎರಡು ಮಾತಿಲ್ಲ” ಎಂದು ತಿಳಿಸಿದರು.
2028ಕ್ಕೆ ಸಿಎಂ ಆಕಾಂಕ್ಷಿ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ನೀಡಿದ್ದು, ನಿಮ್ಮ ಸಹೋದರನನ್ನು ಸಿಎಂ ಮಾಡುವ ನಿಮ್ಮ ಆಸೆ ಕತೆ ಏನು ಎಂದು ಕೇಳಿದಾಗ, “ಶಾಸಕರಾಗಬೇಕು, ಸಂಸದರಾಗಬೇಕು, ಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂದು ಹಣೆಯಲ್ಲಿ ಬರೆದಿರಬೇಕು. ಅದು ಭಗವಂತನ ಇಚ್ಛೆ, ಜನರ ಆಶೀರ್ವಾದ. ಯಾರ ಹಣೆಯಲ್ಲಿ ಏನು ಬರೆದಿದೆಯೋ?
ಸದಾನಂದಗೌಡರು ಕೆಎಂಎಫ್ ಅಧ್ಯಕ್ಷಗಿರಿಗೆ ಅಂಗಲಾಚುತ್ತಿರುವಾಗ ಮೂರೇ ತಿಂಗಳಲ್ಲಿ ಮುಖ್ಯಮಂತ್ರಿಯಾದರು. ಬಸವರಾಜ ಬೊಮ್ಮಾಯಿ ಅವರು ಕೂಡ ಅನಿರೀಕ್ಷಿತವಾಗಿ ಸಿಎಂ ಆದರು. ಯಾವುದೇ ನಿರೀಕ್ಷೆ ಇಲ್ಲದೆ ಜಾತಿ ಬೆಂಬಲ ಇಲ್ಲದೆ ವೀರಪ್ಪ ಮೋಯ್ಲಿ ಅವರು ಸಿಎಂ ಆದರು. ಧರಂ ಸಿಂಗ್ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಿಎಂ ಆಗಿದ್ದಾರೆ. ಅನೇಕ ಇತಿಹಾಸಗಳಿವೆ.
ಯಾವ ಸಂದರ್ಭದಲ್ಲಿ ಏನು ಆಗಬೇಕೋ ಅದು ಆಗುತ್ತವೆ. ನಾಳೆ, ನಾಡಿದ್ದೇ ಆಗಬೇಕು ಎಂದು ಆತುರಪಡಲು ಆಗುವುದಿಲ್ಲ. ಹಾಸನದಲ್ಲಿ ಅನಿರೀಕ್ಷಿತವಾಗಿ ಸಾಯುತ್ತಿದ್ದಾರೆ ಎಂದು ನೀವು ಹೆಚ್ಚು ತೋರಿಸಿ ಭಯ ಸೃಷ್ಟಿಸುತ್ತಿದ್ದೀರಿ. ದುರ್ಬಲ ಹೃದಯದವರು ಆಸ್ಪತ್ರೆ ಸೇರುವಂತಾಗಿದೆ. ನೀವು ಹೆಚ್ಚು ತೋರಿಸುವುದನ್ನು ಕಡಿಮೆ ಮಾಡಿ. ನೀವೆಲ್ಲಾ ಸೇರಿ ಹೃದಯ ತಜ್ಞರಿಗೆ ಕೆಲಸ ನೀಡಬೇಕು ಎಂದು ತೀರ್ಮಾನಿಸಿದ್ದೀರಾ ಹೇಗೆ” ಎಂದು ಚಟಾಕಿ ಹಾರಿಸಿದರು.