ಮೈಸೂರಿನಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಕ್ರಾಯಕ್ರಮ 
ರಾಜಕೀಯ

ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಉತ್ತರ ಸಿಕ್ಕಿದೆ; ಗ್ಯಾರಂಟಿ ಸ್ಕೀಮ್ ಟೀಕಿಸಿದ್ದ BJP ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದೆ: ಡಿ.ಕೆ ಶಿವಕುಮಾರ್

ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಮಾಡಿದ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ನಾವು ಇಲ್ಲಿಗೆ ಜನರಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ.

ಮೈಸೂರು: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರ ಕಣ್ಣಿಗೆ ಕಾಣುತ್ತಿವೆ. ನಮ್ಮ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ ಬೇರೆ ರಾಜ್ಯಗಳಲ್ಲಿ ಅದನ್ನೇ ನಕಲು ಮಾಡುತ್ತಿದೆ. ವಿರೋಧ ಪಕ್ಷಗಳ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸ ಉಳಿಯುತ್ತವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಮೈಸೂರಿನಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ. ಈ ಗ್ಯಾರಂಟಿ ಯೋಜನೆಗಳು ಸುಳ್ಳು, ಇದರಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಮಂತ್ರಿಗಳಿಂದ ಹಿಡಿದು ರಾಜ್ಯದ ಬಿಜೆಪಿ ನಾಯಕರವರೆಗೂ ಎಲ್ಲರೂ ಟೀಕೆ ಮಾಡಿದರು. ನಂತರ ನಡೆದ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ ಸೇರಿದಂತೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗಿಂತ ಮೊದಲೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಬಿಹಾರದಲ್ಲೂ ನಮ್ಮದೇ ಗ್ಯಾರಂಟಿ ಯೋಜನೆ ನಕಲು ಮಾಡಿದ್ದಾರೆ" ಎಂದು ಟೀಕಿಸಿದರು.

ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಮಾಡಿದ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ನಾವು ಇಲ್ಲಿಗೆ ಜನರಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನಮ್ಮ ಸರ್ಕಾರ ಬಂದ ನಂತರ ನಾನು ಹಾಗೂ ಸಿದ್ದರಾಮಯ್ಯ ಅವರು ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ಐದು ವರ್ಷದ ಗೃಹಲಕ್ಷ್ಮೀ ಯೋಜನೆ ಹಣವನ್ನು ತಾಯಿಯ ಪಾದಕ್ಕೆ ಅರ್ಪಿಸಿ ಆಶೀರ್ವಾದ ಪಡೆದೆವು" ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ನಡೆಸಿದರು. ನಮ್ಮ ರಾಜ್ಯದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಸಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು" ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ, ಸರ್ಕಾರದಲ್ಲಿ ಹಣವಿಲ್ಲ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಕಲ್ಯಾಣ ಕರ್ನಾಟಕಕ್ಕೆ ನಮ್ಮ ಸರ್ಕಾರ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಬೀದರ್ ನಲ್ಲಿ 2025 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಿದ್ದೇವೆ. ಇತ್ತೀಚೆಗೆ ಇಂಡಿಯಲ್ಲಿ 3400 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದೆವು. ಇಂದು ಮೈಸೂರಿನಲ್ಲಿ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನದಲ್ಲಿ 74 ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದೇವೆ" ಎಂದರು.

"ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿ, 3 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಯೋಜನೆ, ವಿಜಯನಗರದಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳು, ನಂದಿ ಬೆಟ್ಟದಲ್ಲಿ ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದೇವೆ. ನಾವು ಭಾವನೆ ಮೇಲೆ ರಾಜಕೀಯ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ" ಎಂದು ತಿಳಿಸಿದರು.

"ನಮ್ಮ ಸರ್ಕಾರ ದೇವಾಲಯವಿದ್ದಂತೆ. ಆರೋಗ್ಯ, ನೆಮ್ಮದಿಯ ಬದುಕು, ಉತ್ತಮ ಬೆಳೆ, ಆರ್ಥಿಕ ಪ್ರಗತಿ ಹೊಂದಲು ದೇವರಲ್ಲಿ ಪ್ರಾರ್ಥಿಸಲು ನಾವು ದೇವಾಲಯಕ್ಕೆ ಹೋಗುತ್ತೇವೆ. ಕಳೆದ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾವೇರಿ ತಾಯಿ ಜೂನ್ ತಿಂಗಳಲ್ಲಿ ತುಂಬಿದ್ದಾಳೆ. ನಾನು ಹಾಗೂ ಸಿಎಂ ಜೂನ್ 230ರಂದು ಬಂದು ಕಾವೇರಿ ತಾಯಿಗೆ ಬಾಗಿನ ಅರ್ಪಿಸಿ ಪೂಜಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದರೆ ಬರಗಾಲ ಬರುತ್ತದೆ ಎಂಬ ಬಿಜೆಪಿ ಅಪಪ್ರಚಾರ ನುಚ್ಚು ನೂರಾಗಿದೆ" ಎಂದರು.

ಇದು ನಿಮ್ಮ ಹಸ್ತ. ಈ ಹಸ್ತ ಟೀಕೆ ಮಾಡುವ ವಿರೋಧಿಗಳ ಬಾಯಿ ಮುಚ್ಚಿಸಿದೆ, ರೈತರನ್ನು ಉಳಿಸಿದೆ, ಮಹಿಳೆಯರಿಗೆ ಶಕ್ತಿ ತುಂಬಿದೆ, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಕೊಟ್ಟಿದೆ. ಪ್ರತಿ ತಿಂಗಳು ಸುಮಾರು 5 ಸಾವಿರದಷ್ಟು ಆರ್ಥಿಕವಾಗಿ ಶಕ್ತಿ ನೀಡುತ್ತಿದೆ" ಎಂದರು.

"ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಉಳುವವನಿಗೆ ಭೂಮಿ, ಬಡವರಿಗೆ ಮನೆ, ನಿವೇಶನ, ವಿವಿಧ ಪಿಂಚಣಿ ಯೋಜನೆ, ಅಂಗನವಾಡಿ, ಆದಿವಾಸಿಗಳಿಗೆ ಭೂಮಿ, ಶೈಕ್ಷಣಿಕ ಹಕ್ಕು, ಆಹಾರ ಭದ್ರತೆ, ಉದ್ಯೋಗ ಖಾತರಿ ಹೀಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುವಾಗ ವಯಸ್ಸಾದ ಮಹಿಳೆ ಸೌತೆಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇನೆ ಎಂದರು. ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿ ಅಥವಾ ಜೆಡಿಎಸ್ ಕೊಟ್ಟಿದೆಯೇ?" ಎಂದು ಸವಾಲೆಸೆದರು.

"ಈ ಕಾರ್ಯಕ್ರಮ ಮಾಡಿರುವುದು ಚುನಾವಣೆಗಾಗಿ ಅಲ್ಲ. ನೀವು ಕೊಟ್ಟ ಶಕ್ತಿಯಿಂದ ನಿಮ್ಮ ಋಣ ತೀರಿಸಲು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ನ್ಯಾಯ ಒದಗಿಸಿಕೊಟ್ಟಿರುವುದನ್ನು ತಿಳಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮನ್ನು ಟೀಕಿಸಬಹುದು. ನಿಂದಕರು ಇದ್ದಾಗ ಮಾತ್ರ ನಾವು ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ಯಾರು ಎಷ್ಟೇ ಟೀಕೆ ಮಾಡಿದರೂ ನಮ್ಮ ಸರ್ಕಾರ ಮುಂದೆ ಸಾಗುತ್ತಿರುತ್ತದೆ" ಎಂದರು.

"ಕಾವೇರಿ ಜಲಾನಯನ ಪ್ರದೇಶಕ್ಕೆ 3 ಸಾವಿರ ಕೋಟಿ ಅನುದಾನವನ್ನು ನೀಡಿ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾ ಕ್ಷೇತ್ರದಲ್ಲಿ ಕ್ರಾಂತಿ ತರಲು ರಾಜ್ಯದಲ್ಲಿ 2 ಸಾವಿರ ಕೆಪಿಎಸ್ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

SCROLL FOR NEXT