ಬೆಂಗಳೂರು: ನಿಮಗೆ ಹೈಕಮಾಂಡ್ ತಪರಾಕಿ ಹಾಕಿದಾಕ್ಷಣ, ಮರು ಸಮೀಕ್ಷೆ ಮಾಡುವ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದೀರಿ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ನಿಮಗೆ ರಾಜ್ಯದ ಜನರ ಮೇಲೆ, ಮಠಾಧೀಶರು, ಸಮುದಾಯಗಳ ಮುಖಂಡರ ಮೇಲೆ ವಿಶ್ವಾಸವಿಲ್ಲ. ನೀವು ಏನಿದ್ದರೂ ಹೈಕಮಾಂಡ್ ವಾಕ್ಯ ಪರಿಪಾಲಕ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ, ಜಾತಿಗಣತಿ ಮರು ಸಮೀಕ್ಷೆ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರ ಪ್ರಶ್ನೆಗಳು ಎಂದು ಬರೆದುಕೊಂಡಿರುವ ಅಶೋಕ್, ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು, ಸ್ವತಃ ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಶಾಸಕರು ವಿರೋಧ ಮಾಡುತ್ತಿದ್ದರೂ, ಅದನ್ನು ಬಲವಾಗಿ ಸಮರ್ಥಿಸಿಕೊಂಡು, ಸಚಿವ ಸಂಪುಟದ ಮುಂದೆ ತರಲು ನೀವು ಇಷ್ಟೆಲ್ಲಾ ಹಠ ಹಿಡಿದಿದ್ದಿರಿ, ಆದರೆ ನಿಮಗೆ ಹೈಕಮಾಂಡ್ ತಪರಾಕಿ ಹಾಕಿದಾಕ್ಷಣ, ಮರು ಸಮೀಕ್ಷೆ ಮಾಡುವ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದೀರಿ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರು 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸಮೀಕ್ಷೆ ಹೇಗೆ ಸಾಧ್ಯ ಎಂಬುದು ಜನಸಾಮಾನ್ಯರ ಆತಂಕವಾಗಿದೆ. ಶಾಲೆಗಳು ಈಗಾಗಲೇ ಆರಂಭವಾಗಿವೆ. ಇಂತಹ ಸಮಯದಲ್ಲಿ ಸಮೀಕ್ಷೆಯಂತಹ ಬೃಹತ್ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿದರೆ, ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಬುಡಮೇಲಾಗುತ್ತವೆ. ಮಕ್ಕಳ ಭವಿಷ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಹಾಗಾದರೆ, ಈ 90 ದಿನಗಳಲ್ಲಿ ಸಮೀಕ್ಷೆಯನ್ನು ನಡೆಸಲು ಸರ್ಕಾರ ಯಾರನ್ನು ನಿಯೋಜಿಸಲಿದೆ?
ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಮತ್ತೊಂದು ಅವಿವೇಕದ ಕ್ರಮವೆಂದು ತೋರುತ್ತಿದೆ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ, ಇಂತಹ ಸಮೀಕ್ಷೆ ಹೇಗೆ ಸಾಧ್ಯ? ಇದರಿಂದ ಮಾಹಿತಿಯ ನಿಖರತೆ ಮತ್ತು ಗುರುತುಪತ್ತೆ ಹೇಗೆ ಸಾಧ್ಯವಾಗುತ್ತದೆ? ತಪ್ಪು ದಾಖಲಾತಿಗಳನ್ನು ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ? ಎಂದು ಪ್ರಶ್ನಿಸಿದ್ದಾರೆ.
ಜಾತಿ ಜನಗಣತಿಗಾಗಿ ಈಗಾಗಲೇ ಖರ್ಚಾದ ಈ ಬೃಹತ್ ಮೊತ್ತಕ್ಕೆ ಯಾರು ಹೊಣೆಗಾರರು? ಈ ಹಿಂದೆ ಸಿದ್ಧಪಡಿಸಿದ್ದ ಕಾಂತರಾಜು-ಜಯಪ್ರಕಾಶ್ ಹೆಗ್ಡೆ ಅವರ 'ಚೌಚೌ ವರದಿ'ಗೆ ಈಗ ಎಳ್ಳು-ನೀರು ಬಿಟ್ಟಂತಾಗಿದೆ. ಆ ವರದಿಗೆ ತೆರಿಗೆದಾರರ 167 ಕೋಟಿ ರೂ. ವೆಚ್ಚವಾಗಿದೆ. ಈ ಹಣವನ್ನು ಯಾರಿಂದ ವಸೂಲಿ ಮಾಡುತ್ತೀರಿ?
ಈ ಎಲ್ಲ ಬೆಳವಣಿಗೆಗಳಿಗಿಂತ ಮಿಗಿಲಾಗಿ, ಮುಖ್ಯಮಂತ್ರಿಗಳು ಮತ್ತು ಅವರ ಹೈಕಮಾಂಡ್ ಸೇರಿಕೊಂಡು, ಇತ್ತೀಚಿನ ಐಪಿಎಲ್ ವಿಜಯೋತ್ಸವ ದುರಂತವನ್ನು ಮರೆಮಾಚಲು ಮತ್ತೊಂದು ಬೃಹತ್ ನಾಟಕ ಆರಂಭಿಸಿರುವ ಅನುಮಾನಗಳು ದಟ್ಟವಾಗಿವೆ. ಇದು ನಿಜಕ್ಕೂ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೇ? ಎಂದು ತಪರಾಕಿ ಹಾಕಿದ್ದಾರೆ.
ನಿಮಗೆ ನಿಜಕ್ಕೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ, ಸಮೀಕ್ಷೆ ಹೇಗಿರಬೇಕು ಎಂಬ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ನಡೆಸಿ. ಹಾಗೆಯೇ, ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ, ಎಲ್ಲರ ಅಭಿಪ್ರಾಯಗಳನ್ನು ಆಲಿಸಿ. ಸಮಗ್ರವಾಗಿ ಎಲ್ಲ ಸಿದ್ಧತೆಗಳನ್ನು ಮುಗಿಸಿ, ಈ ಶೈಕ್ಷಣಿಕ ವರ್ಷ ಮುಗಿದ ಬಳಿಕವಷ್ಟೇ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಿ. ಇದು ರಾಜ್ಯದ ಹಿತದೃಷ್ಟಿಯಿಂದ ಅತಿ ಅವಶ್ಯಕ ಎಂದು ಸಲಹೆ ನೀಡಿದ್ದಾರೆ.