ಬೆಂಗಳೂರು: ರಾಜ್ಯ ಬಿಜೆಪಿಯ ಆಂತರಿಕ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಗಳು ಕಂಡು ಬಂದಿವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದಿಢೀರ್ ದೆಹಲಿಗೆ ತೆರಳಿದ್ದು, ಈ ಬೆಳವಣಿಗೆ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳು ಶುರುವಾಗುವಂತೆ ಮಾಡಿದೆ.
ಕಳೆದವಾರ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವೇಳೆ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕೆಲವೊಂದಿಷ್ಟು ಚೆರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಬಂದಿದ್ದ ವೇಳೆ ಇತರ ಪ್ರತ್ಯೇಕ ಬಣವೂ ಕೂಡ ಸಭೆ ಮಾಡಿತ್ತು. ಈ ಸಭೆಯಲ್ಲಿ ಸಚಿವ ಸೋಮಣ್ಣ ಭಾಗಿಯಾಗಿದ್ದು ಕೂಡ ಚರ್ಚೆಯಾಗಿತ್ತು ಎಂದು ತಿಳಿದುಬಂದಿದೆ.
ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮರು ನೇಮಕ ಮಾಡಲು ಸಿದ್ಧರಾಗಿದ್ದು, ಇತರರು ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಪ್ರಸ್ತುತ ಕೇಂದ್ರ ಕೃಷಿ ಸಚಿವರಾಗಿರುವ ಚೌಹಾಣ್ ಅವರು, ಮುಂದಿನ ತಿಂಗಳು ರಾಜ್ಯಕ್ಕೆ ಬಂದು ಪಕ್ಷದ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ ಪಕ್ಷದ ಮೂಲಗಳು ತಿಳಿಸಿವೆ.
ಹೈಕಮಾಂಡ್ ನಿರ್ಧಾರವನ್ನು ಯಾರೂ ಊಹಿಸಲು ಸಾಧ್ಯವಿಲ್ಲ, ಆದರೆ, ಎಲ್ಲಾ ಬಣಗಳನ್ನು ಒಟ್ಟಿಗೆ ಕರೆದೊಯ್ಯುವ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆರಂಭದಲ್ಲಿ ವಿಜಯೇಂದ್ರ ಅವರ ದೆಹಲಿ ಭೇಟಿಯನ್ನು "ಖಾಸಗಿ ಭೇಟಿ" ಎಂದು ಹೇಳಲಾಗುತ್ತಿತ್ತು. ಆದರೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ದೆಹಲಿಗೆ ಭೇಟಿ ನೀಡಿದ್ದು, ಕುತೂಹಲ ಹೆಚ್ಚಿಸಿತ್ತು. ಇದು ನಾಯಕತ್ವ ವಿಚಾರಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದ್ದು, ಭೇಟಿ ವೇಳೆ ರಾಷ್ಟ್ರೀಯ ನಾಯಕರೊಂದಿಗೆ ನಾಯಕತ್ವ ವಿಚಾರ ಕುರಿತು ಮಾತುಕತೆ ನಡೆಸಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಇನ್ನು ದೆಹಲಿಯಿಂದ ನಗರಕ್ಕೆ ವಾಪಸ್ಸಾದ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಅತಿ ಶೀಘ್ರದಲ್ಲೇ ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ಈಗಾಗಲೇ ದೇಶಾದ್ಯಂತ 14 ರಾಜ್ಯಗಳಲ್ಲಿ ಮಾತ್ರ ಅಧ್ಯಕ್ಷರನ್ನ ನೇಮಿಸಲಾಗಿದೆ. ಉಳಿದ ರಾಜ್ಯಗಳಲ್ಲೂ ಆಯ್ಕೆ ಮಾಡಲಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರನ್ನ ನೇಮಕ ಮಾಡಲಿದ್ದಾರೆ. ಇದು ಬಿಜೆಪಿ ಪಕ್ಷದಲ್ಲಿರುವಂತ ಒಂದು ವಿಧಾನ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ಬಿಜೆಪಿ ಪದಾಧಿಕಾರಿಗಳ ಬದಲಾವಣೆಯಾಗುವ ಸುಳಿವು ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರುಗಳ ಆರೋಪದ ಕುರಿತು ಪ್ರತಿಕ್ರಿಯಿದ ಅವರು, ಬಿಜೆಪಿ ಈ ಬಗ್ಗೆ ರಾಜ್ಯಾಧ್ಯಂತ ಪ್ರತಿಭಟನೆ ಮಾಡಲಿದೆ. ವಸತಿ ಇಲಾಖೆಯಲ್ಲಿನ ಹಣ ಅದು ಬಡವರಿಗೆ ಸೇರಬೇಕಾಗಿದ್ದು, ಬಡವರ ಹಣವನ್ನು ಲಂಚ ಹೊಡೆಯುತ್ತಿರುವುದರ ವಿರುದ್ಧ ನಾವು ಪಂಚಾಯತಿ ಮಟ್ಟದಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.