ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಮಹತ್ವದ ನಡೆಯಿತು.
ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ ಹಾಗೂ ಮುಂಬರುವ ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ, ವಿಧಾನಮಂಡಲ ಕಲಾಪದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಇತ್ಯಾದಿ ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಆದರೆ, ಇಂದಿನ ಸಭೆಯಲ್ಲೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಗೈರಾಗಿದ್ದರು.
ಸಭೆಯಲ್ಲಿ ರಾಜ್ಯದ ಉದ್ದಗಲಕ್ಕೂ ಪಕ್ಷದ ವತಿಯಿಂದ ಸದಸ್ಯತ್ವ ಅಭಿಯಾನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖಂಡರ ಜೊತೆ ತಮ್ಮದೇ ಆದ ಪರಿಕಲ್ಪನೆಗಳನ್ನು ಹಂಚಿಕೊಂಡರು. ಸದಸ್ಯತ್ವ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು. ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು, ಸದಸ್ಯತ್ವ ನೋಂದಣಿಯನ್ನು ಎಲ್ಲಾ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು. ಸಂಘಟನೆಯ ಬಗ್ಗೆ ಅಸಡ್ಡೆ ಬೇಡ ಎಂದು ಕಿವಿಮಾತು ಹೇಳಿದರು. ಹಿಂದೆ ಇಪ್ಪತ್ತಮೂರು ಜಿಲ್ಲೆಗಳು ಇದ್ದವು. ನಾನು ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ. ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟೋದು ಸುಲಭದ ಕೆಲಸವಲ್ಲ. ಹೀಗಾಗಿ ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ ಎಂದು ಮಾಜಿ ಪ್ರಧಾನಿಗಳು ಮುಖಂಡರಿಗೆ ತಾಕೀತು ಮಾಡಿದರು.
ಯಾರೂ ಎದೆಗುಂದಬೇಕಿಲ್ಲ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಮಾಡೋಣ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಿ. ಯಾರೂ ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎಂದು ಕರೆಯಬೇಡಿ. ಒಬ್ಬ ಕಾರ್ಯಕರ್ತ ಎಂದು ಕರೆಯಿರಿ ಸಾಕು. ಎಲ್ಲಿಗೆ ಬೇಕಾದರೂ ಕರೆಯಿರಿ, ಬರುತ್ತೇನೆ. ನಿಮ್ಮ ಜೊತೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೇಳಿದರು.
ಚುನಾವಣೆ ಬಂದಾಗ ಎಚ್ಚೆತ್ತುಕೊಂಡರೆ ಉಪಯೋಗವಿಲ್ಲ: ಕುಮಾರಸ್ವಾಮಿ
ಲೋಕಸಭೆ, ವಿಧಾನಸಭೆ ಅಥವಾ ಇನ್ನಾವುದೇ ಚುನಾವಣೆ ಬಂದಾಗ ಎಚ್ಚೆತ್ತರೆ ಉಪಯೋಗ ಇಲ್ಲ. ಹಲವು ವರ್ಷಗಳಿಂದಲೇ ನಾವು ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಹೇಳಿದರು. ನಾಯಕನಾಗುವ ಕನಸು ಕಟ್ಟಿಕೊಂಡರೆ ಸಾಲದು. ಅದಕ್ಕೆ ಮೂಲ ಬಂಡವಾಳ ಎಂದರೆ ಪಕ್ಷ ಸಂಘಟನೆ. ನಿಮ್ಮ ಕ್ಷೇತ್ರ, ಮತಗಟ್ಟೆ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟಿ. ಸದಸ್ಯತ್ವ ಅಭಿಯಾನವನ್ನು ವೇಗಯುತವಾಗಿ ನಡೆಸಬೇಕು. ಯುವಜನರು, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಬೇಕು ಎಂದು ಸಚಿವರು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಡಾ. ಕೆ.ಅನ್ನದಾನಿ, ಕೆ.ಎ. ತಿಪ್ಪೇಸ್ವಾಮಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡರು.
ಆದರೆ ಕೆಲವು ದಿನಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ. ದೇವೇಗೌಡ ಇಂದಿನ ಸಭೆಯಲ್ಲೂ ಪಾಲ್ಗೊಳ್ಳಲಿಲ್ಲ. ಈ ಹಿಂದೆ JDS ನೂತನ ರಾಜ್ಯಾಧ್ಯಕ್ಷ ಆಯ್ಕೆ ವೇಳೆ ನಡೆದ ಸಭೆಯಿಂದಲೂ ಅವರು ದೂರ ಉಳಿದಿದ್ದರು.