ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ 
ರಾಜಕೀಯ

ಹಣಕಾಸು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ ಎಂದ ವಿಪಕ್ಷ: ಕೇಂದ್ರದಂತೆ ಬೇಕಾಬಿಟ್ಟಿ ಆಡಳಿತ ಮಾಡಿಲ್ಲ, ಮುಂದಿನ ವರ್ಷ ಹೆಚ್ಚುವರಿ ಬಜೆಟ್ ಮಂಡನೆ- ಸಿಎಂ ತಿರುಗೇಟು

ಬಜೆಟ್‌ ಮೇಲಿನ ಭಾಷಣದ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ರಾಜ್ಯದ ಸಾಲ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು. ಈ ವೇಳೆ ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಶುರುವಾಯಿತು.

ಬೆಂಗಳೂರು: ಹಣಕಾಸು ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ವಿಧಾನಸಭೆಯಲ್ಲಿ ಗುರುವಾರ ಜಟಾಪಟಿ ನಡೆಯಿತು.

ಬಜೆಟ್‌ ಮೇಲಿನ ಭಾಷಣದ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ರಾಜ್ಯದ ಸಾಲ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು. ಈ ವೇಳೆ ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಶುರುವಾಯಿತು.

ಇದು ದೀರ್ಘ‌ಕಾಲದ ಆರ್ಥಿಕ ಸುಸ್ಥಿತಿ ಮಾಡುವ ಬಜೆಟ್‌ ಅಲ್ಲ. ತಾತ್ಕಾಲಿಕ ರಾಜಕೀಯ ಲಾಭದ ಬಜೆಟ್‌ ಎಂದು ಆರ್.ಅಶೋಕ್ ಅವರು ಟೀಕಿಸಿದರು.

4.09 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದು, ಬಂಡವಾಳ ವೆಚ್ಚವಾಗಿ 83 ಸಾವಿರ ಕೋಟಿ ರೂ. ಇಟ್ಟಿದೆ. ಅಂದರೆ ಅಭಿವೃದ್ಧಿಗೆ ಶೇ.17ರಷ್ಟು ಹಣ ಖರ್ಚು ಮಾಡುವುದಾಗಿ ಮಾತ್ರ ಹೇಳಿದೆ. ಕೋವಿಡ್‌ ಪರಿಸ್ಥಿತಿ ಇದ್ದರೂ 2021-22ರಲ್ಲಿ 80,641 ಕೋಟಿ ರೂ. ಸಾಲ ಮಾಡಲಾಗಿತ್ತು. 2022-23ರಲ್ಲಿ 44,549 ಕೋಟಿ ರೂ., 2023-24ರಲ್ಲಿ 90,280 ಕೋಟಿ ರೂ., 2024-25ರಲ್ಲಿ 1.07 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಸಿದ್ದರಾಮಯ್ಯ ಬರುತ್ತಿದ್ದಂತೆ ಸಾಲ ಹೆಚ್ಚಾಗಿದ್ದ‌ನ್ನು ಗಮನಿಸಬೇಕು ಎಂದು ಹೇಳಿದರು.

ಸಾಲ ಮಾಡುವುದು ತಪ್ಪಲ್ಲ. ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಾಡಬೇಕು. ಎಂದೆಲ್ಲ 2017ರಲ್ಲಿ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಈಗ ಸಾಲ ಮಾಡುತ್ತಿರುವುದು ಉಚಿತ ಭಾಗ್ಯಗಳಿಗೆ ಖರ್ಚು ಮಾಡಲು ಅಲ್ಲವೇ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ, ಅಂದು ನಾನು ಹೇಳಿದ್ದಕ್ಕೆ ಈಗಲೂ ಬದ್ಧನಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯವಾಗಿ ಇರಬೇಕೆಂದರೆ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ 3 ಮಾನದಂಡಗಳನ್ನು ಅನುಸರಿಸಬೇಕು. ವಿತ್ತೀಯ ಕೊರತೆಯು ಶೇ.3ರಷ್ಟಿರಬೇಕು ಹಾಗೂ ಸಾಲದ ಪ್ರಮಾಣವು ಜಿಎಸ್‌ಡಿಪಿಯ ಶೇ.25ರೊಳಗೆ ಇರಬೇಕು ಎಂದಿದೆ. ನಮ್ಮ ವಿತ್ತೀಯ ಕೊರತೆಯು ಶೇ.2.91 ರಷ್ಟು ಹಾಗೂ ಸಾಲದ ಪ್ರಮಾಣವು ಜಿಎಸ್‌ಡಿಪಿಯ ಶೇ.24.91 ರಷ್ಟಿದೆ. ರಾಜಸ್ವ ಹೆಚ್ಚಳ ಇರಬೇಕಿತ್ತು. ಅದೊಂದು ಮಾನದಂಡ ಪಾಲಿಸಲಾಗಿಲ್ಲ. ಆದರೂ ರಾಜಸ್ವ ಕೊರತೆ ಕಡಿಮೆಯಾಗಿದ್ದು, ಮುಂದಿನ ವರ್ಷ ರಾಜಸ್ವ ಹೆಚ್ಚಳ ಆಗಲಿದೆ ಎಂದು ಹೇಳಿದರು.

ಕಳೆದ ವರ್ಷ 27,000 ಕೋಟಿ ರೂ.ಗಳ ಆದಾಯ ಕೊರತೆ ಇತ್ತು. ಈ ವರ್ಷ ಅದನ್ನು 2025-26ರಲ್ಲಿ ರೂ.ಗೆ ಇಳಿಸಲಾಗಿದೆ. ಮುಂದಿನ ವರ್ಷ ನಾವು 19,262 ಕೋಟಿ ರೂಪಾಯಿಗಳ ಹೆಚ್ಚುವರಿ ಬಜೆಟ್ ಮಂಡಿಸುತ್ತೇವೆಂದು ತಿಳಿಸಿದರು.

ರಾಜ್ಯದ ಆದಾಯವನ್ನು ಹೆಚ್ಚಿಸಲು ಜನರನ್ನು ಮದ್ಯ ವ್ಯಸನಿಗಳಾಗುವಂತೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಅಶೋಕ್ ಅವರು ಕಿಡಿಕಾರಿದರು. ಹದಿನಾರು ಬಜೆಟ್ ಮಂಡಿಸಿದ ಸಿದ್ದರಾಮಯ್ಯ ತುಂಬಾ ದುರ್ಬಲರು ಎಂದು ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, 2014-15 ರವರೆಗೆ 53.11 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲ ಈಗ 200 ಲಕ್ಷ ಕೋಟಿ ರೂ. ಹೇಗಾಯಿತು? ನೀವು ಕೊಂಡಾಡುವ ಪ್ರಧಾನಿ ಮೋದಿ ಈ ಬಾರಿ 15 ಲಕ್ಷ ಕೋಟಿ ರೂ. ಸಾಲ ಮಾಡುತ್ತಿಲ್ಲವೇ? ಈ ಭಂಡತನ ಪ್ರದರ್ಶನ ಮಾಡಬೇಡಿ ಎಂದು ಏರುಧ್ವನಿಯಲ್ಲಿ ಗುಡುಗಿದರು.

ಇದಕ್ಕೆ ಬಿಜೆಪಿಯ ಸುನೀಲ್‌ ಕುಮಾರ್‌, ಸಿ.ಸಿ. ಪಾಟೀಲ್‌ ಅವರು, ಭಂಡತನ ನಿಮ್ಮದು ನಮ್ಮದಲ್ಲ ಎಂದರು. ಸತ್ಯ ಯಾವಾಗಲೂ ಸಿಹಿ ಇರಲ್ಲ, ಕಹಿ ಇರುತ್ತದೆ. ಕೇಂದ್ರ ಬಗ್ಗೆ ಹೇಳಿದರೆ ಎಲ್ಲರೂ ಎದ್ದು ನಿಲ್ಲುತ್ತೀರಿ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ನಾವಿಲ್ಲಿ ರಾಜ್ಯ ಬಜೆಟ್‌ ಮೇಲೆ ಮಾತನಾಡುತ್ತಿದ್ದೇವೆ, ಕೇಂದ್ರ ಬಜೆಟ್‌ ಬಗ್ಗೆ ಅಲ್ಲ ಎಂದು ಬಿಜೆಪಿಯ ಡಾ| ಅಶ್ವತ್ಥನಾರಾಯಣ ಹೇಳಿದರೆ, ಇದು ಒಕ್ಕೂಟ ವ್ಯವಸ್ಥೆ, ಹೊಟ್ಟೆ ಉರಿ ಇರಬಾರದು ಎಂದು ಮುಖ್ಯಮಂತ್ರಿ ತಿರುಗೇಟು ಕೊಟ್ಟರು.

ಒಕ್ಕೂಟ ವ್ಯವಸ್ಥೆ ಈಗ ನೆನಪಾಯಿತೇ? ನಿಮ್ಮ ಡಿ.ಕೆ. ಸುರೇಶ್‌ ಏನು ಹೇಳಿದ್ದರು? ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂದಿರಲಿಲ್ಲವೇ ಎಂದು ಬಿಜೆಪಿಯ ಸುನೀಲ್‌ ಕುಮಾರ್‌ ಹೇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ನಡೆದ ಚರ್ಚೆ ವೇಳೆ ಮುಖ್ಯಮಂತ್ರಿಗಳ ಅನುಪಸ್ಥಿತಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಮುಖ್ಯಮಂತ್ರಿಗಳು ಸದನದಲ್ಲಿರಬೇಕೆಂದು ಒತ್ತಾಯಿಸಿದವು, ಬಳಿಕ ಆಡಳಿತ ಪಕ್ಷವು ಮಧ್ಯಾಹ್ನ ಸದನಕ್ಕೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆಂದು ತಿಳಿಸಿದರು.

ಮುಖ್ಯಮಂತ್ರಿಗಳು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯನ್ನೇ ದೊಡ್ಡ ಸಮಸ್ಯೆಯಾಗಿ ಬಿಂಬಿಸಿದ್ದಕ್ಕೆ ಸಚಿವರಾದ ಎನ್. ಚಲುವರಾಯಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ಅವರು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT