ಕೊಪ್ಪಳ: ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಹಿಂದೂಗಳ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಪಕ್ಷದಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಪ್ಪ- ಮಗನ ಪಕ್ಷವಾಗಿದ್ದು, ಲಿಂಗಾಯತ ಹಾಗೂ ಬಿಜೆಪಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿ ಜೈಲಿಗೆ ಹೋದ ಯಡಿಯೂರಪ್ಪ, ಅಪ್ಪನ ಸಹಿ ನಕಲಿ ಮಾಡಿದ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್ ಕೂಡಾ ಬೆಂಬಲವಾಗಿ ನಿಂತಿದೆ. ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪಗೆ ಲೀಸ್ ಕೊಟ್ಟಿದೆಯಾ? ಅಥವಾ ಆ ಕುಟುಂಬಕ್ಕೆ ಮಾರಿಕೊಡಿದ್ದೆಯಾ ಎನ್ನುವ ಪ್ರಶ್ನೆ ರಾಜ್ಯದ ಜನರಲ್ಲಿದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಸಾವಿರಾರು ಕೋಟಿ ರೂಪಾಯಿ ಹಗರಣ ಮಾಡಿರುವುದರಿಂದ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಾಗಿಯೇ ಯಡಿಯೂರಪ್ಪ ಕುಟುಂಬ ಬಚಾವ್ ಆಗುತ್ತಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಹೊರಡಿದ್ದರೆ ಯಡಿಯೂರಪ್ಪ ಹಾಗೂ ಅವರ ಪುತ್ರ ಜೈಲಿಗೆ ಹೋಗಲಿದ್ದಾರೆ ಎಂದರು.
ತಮ್ಮ ಹೊಸ ಪಕ್ಷ ಸ್ಥಾಪನೆ ಕುರಿತಂತೆ ಮಾತನಾಡಿದ ಯತ್ನಾಳ್, ಪಕ್ಷಕ್ಕೆ ಜಾತಿ ಬಣ್ಣ ಮೀರಿದ ಗುರುತು ನೀಡಲು ಯತ್ನಿಸಲಾಗುವುದು, ನಾವು ಕಿತ್ತೂರು ರಾಣಿ ಚನ್ನಮ್ಮ ಅಥವಾ ರಾಯಣ್ಣ ಬ್ರಿಗೇಡ್‌ಗೆ ಸೀಮಿತವಾಗದೆ (ಇಡೀ) ಹಿಂದೂ ಸಮುದಾಯಕ್ಕಾಗಿ ಕೆಲಸ ಮಾಡುತ್ತೇವೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ ಮತ್ತು ಬಿ ಆರ್ ಅಂಬೇಡ್ಕರ್ ಅವರನ್ನು ನಂಬುವವರೆಲ್ಲರನ್ನು ನಾವು ಕರೆದುಕೊಂಡು ಹೋಗುತ್ತೇವೆ. ವಿಜಯದಶಮಿಯವರೆಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಂತರ ಮುಂದಿನ ರಾಜಕೀಯ ನಡೆ ನಿರ್ಧರಿಸಿವೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ಅಲ್ಲಿ ನಮ್ಮ ಯುವಕರು ಹಾಗೂ ಹಿಂದೂಗಳು ಇದ್ದಾರೆ. ಈಗಿನ ಬಿಜೆಪಿ ಹಿಂದೂಗಳ ಪರವಾಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ಅನಿಲ್ ಕುಮಾರ್ ಭೇಟಿ ಕುರಿತು ಕಾಂಗ್ರೆಸ್ ಸೇರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿದ ಯತ್ನಾಳ್, ಕಾಂಗ್ರೆಸ್ ಮುಸ್ಲಿಂರ ಪಕ್ಷ, ಈ ಜನ್ಮದಲ್ಲಿ ಅಲ್ಲ. ಮುಂದಿನ ಜನ್ಮದಲ್ಲೂ ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಪಪಡಿಸಿದರು.