ಡಾ.ಜಿ ಪರಮೇಶ್ವರ್ IANS
ರಾಜಕೀಯ

ED ದಾಳಿ: ಪರಮೇಶ್ವರ್ ಬೆನ್ನಿಗೆ ನಿಂತ 'ಕೈ' ಪಡೆ, ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪ

ಜಿ.ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ಇಡಿ ದಾಳಿ ಬಗ್ಗೆ ನಾನು ಮಾಹಿತಿ ಪಡೆದು ಮಾತನಾಡುತ್ತೇನೆ. ಪರಮೇಶ್ವರ್ ಅವರು ಅತ್ಯಂತ ಸರಳ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ.

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಇದು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸಿದೆ.

ಇಡಿ ದಾಳಿ ಕುರಿತು ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಪ್ರಕಾಶ್ ಶೇಷಾರಾಘವಾಚಾರ್ ಅವರು, ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇಡಿಗೆ ಕೆಲವು ವಿಶ್ವಾಸಾರ್ಹ ಮಾಹಿತಿ ಇದ್ದಿರಬಹುದು. ಹೀಗಾಗಿ ದಾಳಿ ನಡೆಸಿರಬಹುದು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಜಿ.ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ಇಡಿ ದಾಳಿ ಬಗ್ಗೆ ನಾನು ಮಾಹಿತಿ ಪಡೆದು ಮಾತನಾಡುತ್ತೇನೆ. ಪರಮೇಶ್ವರ್ ಅವರು ಅತ್ಯಂತ ಸರಳ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರ 1 ಲಕ್ಷಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡಗಳಿಗೆ ಭೂ ಮಾಲೀಕತ್ವವನ್ನು ನೀಡಿದ್ದನ್ನು ಸಹಿಸದ ಬಿಜೆಪಿ, ಕರ್ನಾಟಕದ ಅತಿದೊಡ್ಡ ದಲಿತ ನಾಯಕರಲ್ಲಿ ಒಬ್ಬರಾದ, ಕರ್ನಾಟಕದ ಗೃಹಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದುರುದ್ದೇಶಪೂರಿತ ಇಡಿ ದಾಳಿ ನಡೆಸಿದೆ.

ಭಾರತದ ಸಂವಿಧಾನ ಮತ್ತು ಎಸ್ ಸಿ, ಎಸ್ ಟಿ, ಒಬಿಸಿ ಸಮುದಾಯಗಳ ನಾಯಕರ ಮೇಲೆ ದೇಶಾದ್ಯಂತ ನಡೆಯುತ್ತಿರುವ ನಿರಂತರ ದಾಳಿ ಒಂದು ರೀತಿ ರೂಢಿಯಾಗಿಬಿಟ್ಟಿದೆ. ಪರಮೇಶ್ವರ್ ಅವರ ಮೇಲಿನ ದಾಳಿ ಕೂಡ ಇದೇ ದುಷ್ಟ ಮಾದರಿಯದ್ದು. ತುಮಕೂರು ಗ್ರಾಮೀಣ ಭಾಗದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಲು ಆರಂಭಿಸಿದ, ಪರಮೇಶ್ವರ್ ಅವರು ನಡೆಸುತ್ತಿರುವ ಸಿದ್ಧಾರ್ಥ ತಾಂತ್ರಿಕ ವಿದ್ಯಾಲಯ ಶುರುವಾಗಿದ್ದು 1979 ರಲ್ಲಿ ಅಂದರೆ 46 ವರ್ಷಗಳ ಹಿಂದೆ, ಸಿದ್ದಾರ್ಥ ಮೆಡಿಕಲ್ ಕಾಲೇಜ್ ಶುರುವಾಗಿದ್ದು 1988 ರಲ್ಲಿ ಅಂದರೆ 28 ವರ್ಷಗಳ ಹಿಂದೆ. ಸಂಸ್ಥೆ ಶುರುವಾದ 46 ವರ್ಷಗಳ ನಂತರ ಮೋದಿ ಸರ್ಕಾರ ಈಗ ತಪ್ಪನ್ನ ಹುಡುಕುತ್ತಿರೋದು ನಿಜಕ್ಕೂ ಆಶ್ಚರ್ಯವಾದದ್ದು.

ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಸಕ್ರಿಯವಾಗಿ ತನಿಖೆ ನಡೆಸುತ್ತಿರುವ ಗೃಹ ಇಲಾಖೆಯನ್ನು ಮುನ್ನಡೆಸುತ್ತಿರುವ ಗೃಹಸಚಿವ ಪರಮೇಶ್ವರ್‌ ಅವರ ವಿರುದ್ಧ ನಡೆದಿರುವ ಇಡಿ ದಾಳಿ ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಕುತಂತ್ರ. ಜೊತೆಗೆ ತುಳಿತಕ್ಕೊಳಗಾದವರ ಪರವಾದ ಗಟ್ಟಿಧ್ವನಿಯಾದವರನ್ನು ಕುಗ್ಗಿಸುವ ಒಂದು ಭಾಗ. ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಮುಂದುವರೆಸುವುದರ ಜೊತೆಗೆ 6 ನೇ ಗ್ಯಾರಂಟಿಯಾದ ಭೂಮಿಯ ಹಕ್ಕನ್ನು sc st ಸಮುದಾಯದ 1 ಲಕ್ಷ ನಮ್ಮ ಸಹೋದರ, ಸಹೋದರಿಯರಿಗೆ ನೀಡುವ ಕೈಂಕರ್ಯವನ್ನು ಬದ್ಧತೆಯಿಂದ ನಿರ್ವಹಿಸಲಿದೆ. ಸತ್ಯಕ್ಕೆ ಎಂದಿಗೂ ಜಯ…ಸತ್ಯಮೇವ ಜಯತೆ ಎಂದು ತಿಳಿಸಿದ್ದಾರೆ.

ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, ಸಂಸತ್ತಿನಲ್ಲಿ, ಬಿಜೆಪಿ ಸಚಿವರೇ 193 ಇಡಿ ಪ್ರಕರಣಗಳಿವೆ ಮತ್ತು ಶಿಕ್ಷೆಯ ಪ್ರಮಾಣ ಕೇವಲ 2 ಪ್ರತಿಶತ ಎಂದು ಹೇಳಿದ್ದಾರೆ. ಶೇ.98 ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧ ಇವೆ. ಇಡಿ ದಾಳಿಗಳು ಹೊಸದೇನಲ್ಲ. ಕೇಂದ್ರ ಸರ್ಕಾರ ನಮ್ಮನ್ನು ಬೆದರಿಸಲು ಸಾಧ್ಯವಿರುವ ಎಲ್ಲಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಪರಮೇಶ್ವರ ಅವರು ಸ್ವಚ್ಛ ದಾಖಲೆ ಹೊಂದಿರುವ ಹಿರಿಯ ರಾಜಕಾರಣಿ. ಅವರಿಂದ ಯಾವುದೇ ತಪ್ಪುಗಳಾಗಿಲ್ಲ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ಇನ್ನು ಸುರ್ಜೇವಾಲಾ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲಾ ಅವರೆ, ಅದು ಶಿಕ್ಷಣ ಸಂಸ್ಥೆಯ ಮೇಲಿನ ದಾಳಿ ಅಲ್ಲ, ಅದು ಗೋಲ್ಡ್‌ ಸ್ಮಗ್ಲರ್‌ ರನ್ಯಾ ರಾವ್‌ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಮಾಡಿರುವ ದಾಳಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಮಗೆ ನಿಜಕ್ಕೂ ಪರಮೇಶ್ವರ್ ಅವರ ಮೇಲೆ ಪ್ರೀತಿ, ಮಮತೆ, ಕಾಳಜಿಯಿದ್ದರೆ ಅವರನ್ನು 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಸೋಲಿಸಿದ ಸಿದ್ದರಾಮಯ್ಯ ಅವರನ್ನು ಕೂಡಲೇ ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಎಂದು ಸವಾಲು ಹಾಕಿದೆ.

ಇಡಿ ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ಪರಮೇಶ್ವರ್ ಒಡೆತನದ ತುಮಕೂರು ಮತ್ತು ನೆಲಮಂಗಲದಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಮತ್ತು ತುಮಕೂರಿನ ಎಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿದರು.

ಶೋಧ ಕಾರ್ಯ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪ್ರಾರಂಭವಾಗಿ ಸಂಜೆಯವರೆಗೆ ಮುಂದುವರೆದವು. ಅಧಿಕಾರಿಗಳು 'ಹವಾಲಾ' ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪರಿಶೀಲನೆ ವೇಳೆ ವಶಪಡಿಸಿಕೊಂಡಿರುವುದರ ಕುರಿತು ಇಡಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US Tariff war: ಜೈಶಂಕರ್-ರುಬಿಯೊ ಮಹತ್ವದ ಭೇಟಿ, ಭಾರತ-ಅಮೆರಿಕ ಸಂಬಂಧ ಕುರಿತು ಚರ್ಚೆ!

Indian Army ಗೆ ಮತ್ತಷ್ಟು ಬಲ: ರಷ್ಯಾದ S-400 ವಿತರಣೆ 2026ರ ಹೊತ್ತಿಗೆ ಪೂರ್ಣ: ವರದಿ

TCS Layoffs Row: ಭಾರತದ ಐಟಿ ದೈತ್ಯ ಸಂಸ್ಥೆ ವಿರುದ್ಧ "ಬಲವಂತದ ರಾಜೀನಾಮೆ" ಆರೋಪ! 30,000 ಉದ್ಯೋಗಕ್ಕೆ ಕುತ್ತು?

ರಾಜ್ಯಾದ್ಯಂತ 'ಜಾತಿ ಗಣತಿ' ಆರಂಭ; ಕೆಲವು ಕಡೆ ತಾಂತ್ರಿಕ ದೋಷ, ಹಲವಡೆ ಸರ್ವರ್ ಸಮಸ್ಯೆ

ಅಪ್ರಾಪ್ತ ಬಾಲಕಿ ಜೊತೆ ಓಡಿ ಹೋಗಿ ಸಿಕ್ಕಿಬಿದ್ದ ಯುವಕ: ಪೊಲೀಸ್ ಜೀಪಿನ ಮೇಲೆ ಹತ್ತಿ ಬಾಲಕಿ ಜೊತೆ ಅಶ್ಲೀಲ ನೃತ್ಯ; Video

SCROLL FOR NEXT