ಬೆಂಗಳೂರು: ಅಮಾಯಕ ರೈತನ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬೇಜಾಬ್ದಾರಿ ಕಾರಣ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಿಡಿಕಾರಿದೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡಿದ್ದ 55 ವರ್ಷದ ರೈತ ಬುಧವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರೈತನ ಸಾವು ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕೃಷಿಕನ ಜೀವ ಹಿಂಡಿದ ಕಾಂಗ್ರೆಸ್ ಕಬ್ಬಿಗೆ ಬೆಂಬಲ ಬೆಲೆ ನೀಡದೆ ಅನ್ನದಾತರನ್ನು ಬೀದಿಗೆ ತಳ್ಳಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮಂಡ್ಯ ಜಿಲ್ಲೆಯ ಅನ್ನದಾತ ಉಸಿರು ಚೆಲ್ಲಿದ್ದಾನೆ.
ವಶಪಡಿಸಿಕೊಂಡಿದ್ದ ಜಮೀನಿಗೆ ಸರ್ಕಾರದಿಂದ ಪರಿಹಾರ ಸಿಗದೆ ಹಾಗೂ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಕೊನೆಯುಸಿರೆಳಿದಿದ್ದಾರೆ.
ಅಮಾಯಕ ರೈತನ ಸಾವಿಗೆ ಸಿದ್ದರಾಮಯ್ಯ ಅವರ ಸರ್ಕಾರದ ಬೇಜಾಬ್ದಾರಿ ಕಾರಣ. ಕೃಷಿಕರ ಸಮಸ್ಯೆ ಕೇಳುವ ಕನಿಷ್ಠ ಸೌಜನ್ಯವೂ ಇಲ್ಲದಾಗಿದೆ ಈ ಸರ್ಕಾರಕ್ಕೆ. ಸಿದ್ದರಾಮಯ್ಯನವರೇ, ಕೂಡಲೇ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿ ಎಂದು ಒತ್ತಾಯಿಸಿದೆ.
ಜೆಡಿಎಸ್ ಪೋಸ್ಟ್ ಮಾಡಿ, ರೈತನ ಬಲಿ ಪಡೆದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ (55) ಸಾವಿಗೆ ಕಾಂಗ್ರೆಸ್ ಸರ್ಕಾರದ ಬೇಜಾಬ್ದಾರಿಯೇ ಕಾರಣ.
ಅಧಿಕಾರಿಗಳ ಕಿರುಕುಳ ಹಾಗೂ ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ಸಿಗದಕ್ಕೆ ಮನನೊಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಕೊನೆಯುಸಿರೆಳಿದಿದ್ದಾನೆ. ರಾಜ್ಯ ಸರ್ಕಾರ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದೆ.