ಬೆಂಗಳೂರು: ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಅಷ್ಟೂ ದಿನ ಅವರೇ ಸಿಎಂ. ಮುಂದೆಯೂ ಅವರೇ ಇರಬಹುದು. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಪಕ್ಷ ಸಂಘಟಿಸಿ, ಪಕ್ಷ ಕಟ್ಟುತ್ತಿದ್ದೇವೆ ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು.
ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ, “ಇದೆಲ್ಲವೂ ಊಹಾಪೋಹ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳು ಪಕ್ಷದ ಮುಂದೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಇನ್ನು ವಯಸ್ಸಾಗಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ” ಎಂದರು.
ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ಗುರುವಾರ (ಡಿ.6) ವಿಚಾರಣೆ ನಡೆಯಲಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ವಿಶೇಷ ಪೀಠ ರಚಿಸಿರುವಂತೆ ಕಾಣಿಸುತ್ತದೆ. ಈ ವಿಚಾರಣೆ ವೇಳೆ ನಮ್ಮ ನಿಲುವು ಏನಿರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ವಕೀಲರ ಜೊತೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ ಎಂದರು.
ವರಿಷ್ಠರೂ ದೆಹಲಿಯಲ್ಲಿರುವ ಕಾರಣ ಈ ಪ್ರವಾಸದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ವರಿಷ್ಠರು ದೆಹಲಿಯಲ್ಲಿ ಇರದೇ ಎಲ್ಲಿ ಹೋಗುತ್ತಾರೆ. ಬಿಹಾರ ಚುನಾವಣೆಗೂ ಇದಕ್ಕೂ ಸಂಬಂಧ ವಿಲ್ಲ. ಶಿವಕುಮಾರ್ ಅವರು ಈ ಹಿಂದಿನಿಂದಲೂ ದೆಹಲಿಗೆ ಹೋದಾಗೆಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗುತ್ತಾರೆ, ವರಿಷ್ಠರು ಸಿಕ್ಕರೆ ಮಾತನಾಡುತ್ತಾರೆ, ಬರುತ್ತಾರೆ.
ತುರ್ತಾಗಿ ಮೇಕೆದಾಟು ಪ್ರಕರಣ ವಿಚಾರಣೆಗೆ ಬಂದಿದೆ. ವಿಶೇಷ ಪೀಠ ರಚನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಈ ಪೀಠ ರಚನೆಯಿಂದ ಯಾವ ರೀತಿ ಲಾಭ ಆಗಲಿದೆ, ನಮ್ಮ ನಿಲುವು ಹೇಗಿರಬೇಕು ಎಂದು ಚರ್ಚೆ ಮಾಡಲು ತೆರಳಿದ್ದಾರೆ. ನಾಳೆ ಹೆಚ್ಚು ಕಮ್ಮಿ ಆದರೆ ಯಾಕೆ ಸರಿಯಾಗಿ ನಿಭಾಯಿಸಲಿಲ್ಲ ಎಂದು ನೀವುಗಳೇ ಪ್ರಶ್ನೆ ಮಾಡುತ್ತೀರಿ. ಇದು ರಾಜಕೀಯ ಕೆಲಸ ಅಲ್ಲ. ಕರ್ನಾಟಕ ರಾಜ್ಯದ ಹಿತ ಕಾಪಾಡುವ ಕೆಲಸ” ಎಂದರು.
ಎಲ್ಲಾ ನಾಯಕರೂ ಸೇರಿ ಕಾಂಗ್ರೆಸ್ ಪಕ್ಷವಾಗಿದೆ. ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರಿಂದ ಮಾತ್ರ ಪಕ್ಷವಿಲ್ಲ. ಎಂ.ಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೋಳಿ, ಮಹದೇವಪ್ಪ ಸೇರಿದಂತೆ ಎಲ್ಲಾ ಸಮುದಾದ ನಾಯಕರು ಸೇರಿ ಪಕ್ಷ ಕಟ್ಟಿಕೊಂಡು ಬಂದಿದ್ದೇವೆ ಎಂದರು.
ರಾಜ್ಯ ನಾಯಕರು ಸಧ್ಯಕ್ಕೆ ದೆಹಲಿ ಕಡೆ ಬರಬೇಡಿ ಎಂಬ ಹೈಕಮಾಂಡ್ ಸಂದೇಶ ರವಾನಿಸಿದೆಯೇ ಎಂದು ಕೇಳಿದಾಗ, “ನಾನು ಅಷ್ಟು ದೊಡ್ಡ ನಾಯಕನಲ್ಲ. ನನಗೆ ಬೇಕಾದಾಗ ಹೋಗಿ ಬರುತ್ತೇನೆ” ಎಂದು ತಿಳಿಸಿದರು. ಶಿವಕುಮಾರ್ ಅವರು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದಾರಾ ಎಂದು ಕೇಳಿದಾಗ, “ಆ ವಿಚಾರಗಳು ಇಲ್ಲಿ ಪ್ರಸ್ತಾಪವಿಲ್ಲ. ಈಗ ನಾಯಕತ್ವ ಗಟ್ಟಿಯಾಗಿದೆ” ಎಂದು ಹೇಳಿದರು. ಕಾರ್ಯಕರ್ತರು ಹಾಗೂ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಚುನಾವಣೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಕ್ಷ ಕೂಡ ನಮ್ಮ ಕಾರ್ಯಕರ್ತರಿಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದೆ. ಬೂತ್ ಮಟ್ಟದಲ್ಲಿನ ತಯಾರಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ಕಳೆದ ವಾರವಷ್ಟೇ ವಾರ್ಡ್ ನಿಗದಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ಕಡೇಯ ಕಾಲಾವಕಾಶ ನೀಡಿದೆ. ನಂತರ ಮೀಸಲಾತಿ ಪ್ರಕ್ರಿಯೆ ನಡೆಯಬೇಕಿದ್ದು, ಎಲ್ಲವನ್ನು ಹಂತಹಂತವಾಗಿ ನಡೆಸಲು ಸಿಎಂ ಹಾಗೂ ಡಿಸಿಎಂ ಬದ್ಧರಾಗಿದ್ದಾರೆ ಎಂದರು.
ಅಭಿಮಾನಿಗಳು ಈ ರೀತಿ ಆಸೆ ಪಡುವುದು ಸಹಜ ಪ್ರಕ್ರಿಯೆ. ಅಭಿಮಾನಿಗಳು ತಮ್ಮ ನಾಯಕರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ಇದು ನಿರಂತರ ಪ್ರಕ್ರಿಯೆ. ಕೆಲವರು ಕುಮಾರಸ್ವಾಮಿ ಆಗಬೇಕು ಅಂತಾರೆ, ಮತ್ತೆ ಕೆಲವರು ವಿಜಯೇಂದ್ರ ಆಗಬೇಕು ಅಂತಾರೆ, ಮತ್ತೆ ಕೆಲವರು, ಅಶ್ವತ್ಥ್ ನಾರಾಯಣ, ಅಶೋಕ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅಂತಾ ಬಯಸುತ್ತಾರೆ. ಆಯಾ ಊರಿನಲ್ಲಿ ಅವರ ನಾಯಕರು ಆಗಬೇಕು ಎಂದು ಬಯಸುತ್ತಾರೆ. ಮತ್ತೆ ಕೆಲವರು ವೇದಿಕೆ ಮೇಲೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿ ತಮ್ಮ ಅಭಿಮಾನ ತೋರಿಸುತ್ತಾರೆ. ಇದೆಲ್ಲವು ರಾಜಕಾರಣದ ಭಾಗ. ಇದರ ಬಗ್ಗೆ ದೊಡ್ಡ ಚರ್ಚೆ ಅಗತ್ಯವಿಲ್ಲ. ಈ ಬಗ್ಗೆ ಪಕ್ಷ ಹೈಕಮಾಂಡ್ ಹಂತದಲ್ಲಿ ತೀರ್ಮಾನ ಮಾಡಲಾಗುವುದು ಎಂದರು.