ಬೆಂಗಳೂರು: ನಗರದ ಮೂಲಸೌಕರ್ಯ ಸಮಸ್ಯೆ ಸರಿಪಡಿಸಲು ಸಾಧ್ಯವಾಗದಿದ್ದರೆ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.
ಗುಂಡಿ ಬಿದ್ದ ರಸ್ತೆಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆಯಲು ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಆರ್.ಅಶೋಕ್ ಅವರು, ನಗರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಶಿವಕುಮಾರ್ ವಿಫಲರಾದರೆ, ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಇದೇ ವೇಳೆ ಈ ಅಭಿಯಾನವನ್ನು ನಗರದ ಇತರ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು ಎಂದೂ ಘೋಷಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಟೀಕಿಸಿದ ಅವರು, ಅಕ್ಟೋಬರ್ 31 ರೊಳಗೆ ಬೆಂಗಳೂರನ್ನು ಗುಂಡಿ ಮುಕ್ತಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ ಅದು ಆಗಲಿಲ್ಲ. ತಾನು ಟ್ರಬಲ್ ಶೂಟರ್ ಎಂದು ಡಿಸಿಎಂ ಹೇಳಿಕೊಳ್ಳುತ್ತಾರೆ, ಆದರೆ, ಅವರಿಗೆ ಕಸದ ಮಾಫಿಯಾವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.
ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ನಗರದ ಬಿಜೆಪಿ ಶಾಸಕರು ಮತ್ತು ಸಂಸದರನ್ನು ಪ್ರಶ್ನಿಸಬಹುದಾದರೆ, ನಗರದಲ್ಲಿನ ಮಾಫಿಯಾಗಳ ವಿರುದ್ಧವೇಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ? ಕಸ ಮಾಫಿಯಾ ತೆಲಂಗಾಣದ್ದು. ತೆಲಂಗಾಣದ ಕಾಂಗ್ರೆಸ್ ನಾಯಕ ಮತ್ತು ಸಿಎಂ ರೇವಂತ್ ರೆಡ್ಡಿ ಅವರು ಮಾಫಿಯಾವನ್ನು ನಿಯಂತ್ರಿಸುವಂತೆ ಮನವೊಲಿಸಬೇಕೆಂದು ನಾನು ಡಿಸಿಎಂ ಅವರನ್ನು ಒತ್ತಾಯಿಸುತ್ತೇನೆಂದು ವ್ಯಂಗ್ಯವಾಡಿದರು.
ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯದಿಂದಾಗಿ ನಗರದ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಬಳಿಕ ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಸರ್ಕಾರವು ಬೆಳಗಾವಿ ರೈತರಿಂದ ಮಾತ್ರ ಪ್ರತಿ ಟನ್‌ಗೆ 3,300 ರೂ.ಗೆ ಕಬ್ಬು ಖರೀದಿಸಲು ಒಪ್ಪಿಕೊಂಡಿದೆ. ರಾಜ್ಯದ ಇತರ ಜಿಲ್ಲೆಗಳ ಕಬ್ಬು ಬೆಳೆಗಾರರನ್ನು ನಿರ್ಲಕ್ಷಿಸಬಾರದು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತ ಕಳ್ಳತನ ಅಭಿಯಾನದ ಕುರಿತು ಮಾತನಾಡಿ, "ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ನ್ಯಾಯಾಲಯವು ಮತಗಳ ಮರುಎಣಿಕೆಗೆ ಆದೇಶಿಸಿದೆ. ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆ ಈಗ ಪ್ರಶ್ನಾರ್ಹವಾಗಿದೆ. ಮತಗಳ ಮರುಎಣಿಕೆಯು ಕಾಂಗ್ರೆಸ್‌ನ ಮತ ಚೋರಿ ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದು ತಿರುಗೇಟು ನೀಡಿದರು.
ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಹೀಗಾಗಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಈಗ ಕೇಂದ್ರವನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದರು