ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾನುವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 11 ಪ್ರಶ್ನೆಗಳನ್ನು ಕೇಳಿದ್ದಾರೆ.
ತನ್ನ ಸ್ವಯಂ ಸೇವಕರು ನೀಡುವ ದೇಣಿಗೆಗಳಿಂದ ಆರ್ ಎಸ್ಎಸ್ ಕಾರ್ಯನಿರ್ವಹಿಸುತ್ತದೆ ಎಂಬ ಮೋಹನ್ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಆರ್‌ಎಸ್‌ಎಸ್ ತನ್ನ ಸ್ವಯಂಸೇವಕರು ನೀಡುವ ದೇಣಿಗೆ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದಾಗ್ಯೂ, ಈ ಬಗ್ಗೆ ಹಲವಾರು ಕಾನೂನುಬದ್ಧ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗಳು
ಈ ಸ್ವಯಂ ಸೇವಕರು ಯಾರು, ಹೇಗೆ ಗುರುತಿಸಲಾಗುತ್ತದೆ?
ನೀಡಲಾದ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು?
ಈ ಕೊಡುಗೆಗಳನ್ನು ಯಾವ ಕಾರ್ಯವಿಧಾನಗಳು ಅಥವಾ ಯಾವ ಮಾರ್ಗಗಳ ಮೂಲಕ ಸ್ವೀಕರಿಸಲಾಗುತ್ತೆ?
ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತನ್ನದೇ ಆದ ನೋಂದಾಯಿತ ಗುರುತಿನಡಿಯಲ್ಲಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಯಾಕೆ ನೀಡಲಾಗುವುದಿಲ್ಲ?
ನೋಂದಾಯಿತ ಘಟಕವಾಗದೆ ಆರ್‌ಎಸ್‌ಎಸ್ ಸಂಘಟನೆ ತನ್ನ ಹಣಕಾಸು, ಸಾಂಸ್ಥಿಕ ರಚನೆ ಹೇಗೆ ಉಳಿಸಿಕೊಳ್ಳುತ್ತೆ?
ಪೂರ್ಣ ಸಮಯದ ಪ್ರಚಾರಕರಿಗೆ ಯಾರು ವೇತನ ನೀಡ್ತಾರೆ ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚ ಹೇಗೆ ಪೂರೈಸುತ್ತಾರೆ?
ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು, ಪ್ರಚಾರ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತೆ?
ಸ್ವಯಂಸೇವಕರು ‘ಸ್ಥಳೀಯ ಕಚೇರಿಗಳಿಂದ’ ಸಮವಸ್ತ್ರ ಅಥವಾ ವಸ್ತುಗಳನ್ನು ಖರೀದಿಸಿದಾಗ ಈ ಹಣ ಎಲ್ಲಿ ಲೆಕ್ಕಹಾಕಲಾಗುತ್ತೆ?
ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?
ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಪ್ರಭಾವ ಮತ್ತು ಉಪಸ್ಥಿತಿಯ ಹೊರತಾಗಿಯೂ ನೋಂದಣಿಯಾಗಿಲ್ಲ ಯಾಕೆ?
ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಯು ಆರ್ಥಿಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದಾಗ ಆರ್‌ಎಸ್‌ಎಸ್‌ಗೆ ಇದೇ ರೀತಿಯ ಹೊಣೆಗಾರಿಕೆ ಕಾರ್ಯವಿಧಾನಗಳ ಅನುಪಸ್ಥಿತಿ ಸಮರ್ಥಿಸುವುದು ಏನು?