ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡುತ್ತಿದ್ದು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಉತ್ಸುಕರಾಗಿದದಾರೆ. ಆದರೆ, ಈ ಭೇಟಿ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.
ನಾಯಕತ್ವ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಗೊಂದಲ ಸೃಷ್ಟಿಸಿದ್ದು, ದೆಹಲಿ ಭೇಟಿ ವೇಳೆ ರಾಹುಲ ಗಾಂಧಿಯವರನ್ನು ಭೇಟಿ ಮಾಡಿ, ಈ ವಿಚಾರದ ಬಗ್ಗೆ ಚರ್ಚಿಸಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಆದರೆ, ರಾಹುಲ್ ಗಾಂಧಿಯವರು ಬಿಹಾರ ಚುನಾವಣಾ ಫಲಿತಾಂಶದ ಮರು ದಿನವೇ ನವೆಂಬರ್ 15ರಿಂದ 10 ದಿನಗಳ ಭೇಟಿಗಾಗಿ ಫಿನ್ಲ್ಯಾಂಡ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆಂದು ಪಕ್ಷದ ಮೂಲಗಳು ಮಾಹಿತಿ ನೀಡಿದೆ.
ರಾಹುಲ್ ಗಾಂಧಿ ವಿದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ಚರ್ಚಿಸಲು ದೆಹಲಿಗೆ ಭೇಟಿ ನೀಡದಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಇತರೆ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲವೊಂದು ತಿಳಿಸಿದೆ.
ಆದಾಗ್ಯೂ, ಮಾಜಿ ಕೇಂದ್ರ ಸಚಿವ ಮತ್ತು ಸುಪ್ರೀಂ ಕೋರ್ಟ್ ವಕೀಲ ಕಪಿಲ್ ಸಿಬಲ್ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು, ನವೆಂಬರ್ 15 ರಂದು ದೆಹಲಿಗೆ ಭೇಟಿ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ದೆಹಲಿಗೆ ಭೇಟಿ ನೀಡುವ ಸಿದ್ದರಾಮಯ್ಯ ಅವರು ಒಂದೆರಡು ದಿನಗಳ ಕಾಲ ದೆಹಲಿಯಲ್ಲಿಯೇ ಇರಲಿದ್ದು, ಈ ಅವಧಿಯಲ್ಲಿ ಅವರು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಇದಲ್ಲದೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಕೂಡ ಭೇಟಿ ಮಾಡುವ ನಿರೀಕ್ಷೆಯಿದೆ.
ಈ ವರ್ಷದ ಜುಲೈನಲ್ಲಿ ದೆಹಲಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ನಾಯಕತ್ವದ ವಿಷಯವಾಗಿ ರಾಹುಲ್ ಅವರನ್ನು ಭೇಟಿ ಮಾಡಲು ಮುಂದಾಗಿದ್ದರು. ಆದರೆ, ಭೇಟಿ ಸಾಧ್ಯವಾಗಿರಲಿಲ್ಲ.
ಏತನ್ಮಧ್ಯೆ, ನಾಯಕತ್ವ ಬದಲಾವಣೆ ಮಾಡುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲದ ಕಾರಣ, ಸಿದ್ದರಾಮಯ್ಯ ಅವರು ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಿವಂಗತ ಡಿ. ದೇವರಾಜ್ ಅರಸ್ ಅವರ ದಾಖಲೆಯನ್ನು (ಜನವರಿ 5, 2026 ರಂದು 7 ವರ್ಷ 234 ದಿನಗಳು) ಮುರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬಿಹಾರ ಚುನಾವಣೆಯ ಫಲಿತಾಂಶಗಳು ಕರ್ನಾಟಕದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೈಕಮಾಂಡ್ ಸಂಪುಟ ಪುನರಾಚನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆಯಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ತಮ್ಮ ವಿವೇಚನೆಯನ್ನು ಬಳಸಿಕೊಂಡು ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.