ಬೆಂಗಳೂರು: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಆರೋಪವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ನಂತರ ಉತ್ತಮ ಮತದಾನವಾಗಿದೆ. ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದೆ. ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆಯೇ ಬರುವುದಿಲ್ಲ. ನಾವು ಗೆದ್ದರೆ ಮತಗಳ್ಳತನವಾಗಿದೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಾಗ ಬಾರದ ಅನುಮಾನ ಈಗೇಕೆ ಬಂದಿದೆ? ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆ ಬರುವುದಿಲ್ಲ. ತೆಲಂಗಾಣ ಗೆದ್ದಾಗ ಮತಗಳ್ಳತನ ಇರುವುದಿಲ್ಲ. ಬಿಜೆಪಿ ಗೆದ್ದಾಗ ಮಾತ್ರ ಮತಗಳ್ಳತನದ ಅನುಮಾನ ಏಕೆ ಬರುತ್ತದೆ? ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರೇ ನೀವು ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಓಡಿ ಹೋಗಬೇಡಿ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಮತ್ತು ನಿಮ್ಮ ಪಕ್ಷದ್ದು ಹಿಟ್ ಅ್ಯಂಡ್ ರನ್ ಕೇಸ್. ಬಿಹಾರದಲ್ಲಿ ಎನ್‍ಡಿಎಗೆ ಅದ್ಭುತ ಗೆಲುವು ಸಿಕ್ಕಿದೆ. ಕಾಂಗ್ರೆಸ್‍ಗೆ ಬಿಹಾರದ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಅವರ ಸರ್ಕಾರ ಗೆದ್ದಾಗ ಗೆಲುವು ಎನ್ನುತ್ತಾರೆ. ಸೋತರೆ ವೋಟ್ ಚೋರಿ ಎನ್ನುತ್ತಾರೆ. ರಾಹುಲ್ ಗಾಂಧಿ ಮತ್ತು ಟೀಂ. ಬರೀ ಹಿಟ್ ರನ್ ಮಾಡುವುದಷ್ಟೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಟನಲ್ ರಸ್ತೆ ಯೋಜನೆಗೆ ಆತುರ ಬೇಡ. ಸರಿಯಾದ ಡಿಪಿಆರ್ ಮಾಡಿ. ಪರಿಸರದ ಮೇಲಾಗುವ ಪರಿಣಾಮದ ವರದಿ ಆಗಿಲ್ಲ. ತರಾತುರಿಯಲ್ಲಿ ಯೋಜನೆ ಬೇಡ. ಹೊಸ ಡಿಪಿಆರ್ ಮಾಡಿ, ಪರಿಸರ ಉಳಿಸಿ. ಅಭಿವೃದ್ಧಿಗೆ ನಾವು ವಿರೋಧ ಇಲ್ಲ, ಆದರೆ ಪಾರ್ಕ್, ಸಾರ್ವಜನಿಕ ಸ್ಥಳಗಳನ್ನು ಉಳಿಸಿ ಎಂದು ಮನವಿ ಮಾಡಿದರು.
ಏತನ್ಮಧ್ಯೆ, ಹಿರಿಯ ಬಿಜೆಪಿ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಾತನಾಡಿ, ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದವರು, ಸತ್ತು ಹೋದವರು, ಎರಡು ಹೆಸರು ಇದ್ದ ಮತಗಳನ್ನು ರದ್ದು ಮಾಡಿದ್ದಾರೆ. ಇದರಲ್ಲಿ ತಪ್ಪೇನು? ಸಮಸ್ಯೆ ಇದ್ದಲ್ಲಿ ಅವತ್ತೇ ನಿಮ್ಮ ಏಜೆಂಟ್ ಅದನ್ನು ಪ್ರಶ್ನಿಸಬೇಕಿತ್ತಲ್ಲವೇ, ಈಗ ಎಸ್‍ಐಆರ್ ಸರಿ ಇಲ್ಲ, ಮತಗಳ್ಳತನ ನಡೆದಿದೆ, ಇವಿಎಂ ಸರಿ ಇಲ್ಲ ಎಂದು ಹೇಳಿದರೆ ಹೇಗೆ? ಸೋತ ಮೇಲೆ ಈ ಹೇಳಿಕೆ ಕೊಟ್ಟರೆ ನಿಮ್ಮನ್ನು ಯಾರೂ ನಂಬುವುದಿಲ್ಲ. ಹೇಳಿಕೆಗಳ ಮೂಲಕ ಕಾಂಗ್ರೆಸ್ ಬಿರಾದ ಮತದಾರರನ್ನು ಅವಮಾನಿಸಿದ್ದು ಜನರಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.