ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ-ಡಿಸಿಎಂ ನಡುವೆ ಸಿಎಂ ಕುರ್ಚಿಗಾಗಿ ಕದನ ತಾರಕಕ್ಕೇರುತ್ತಿದ್ದು, ಶಾಸಕರ ಬೆಂಬಲ ಪಡೆಯುವ ಸಂಬಂಚ ಚಟುವಟಿಕೆಗಳು ಚುರುಕುಗೊಂಡಿದೆ.
ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಸಚಿವರು, ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಲು ಯತ್ನಿಸುತ್ತಿದ್ದರೆ, ಇತ್ತ ಸಿಎಂ ಆಪ್ತ ಶಾಸಕರು, ಸಚಿವರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ.
ಈ ಮಧ್ಯೆ ಜೈಲಿನಲ್ಲಿರುವ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರೊಂದಿಗೆ ಚರ್ಚೆ ನಡೆಸಲು ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು.
ಇಬ್ಬರು ಕಾಂಗ್ರೆಸ್ ಶಾಸಕರು ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಪಪ್ಪಿ ಜೈಲು ಸೇರಿದ್ದಾರೆ.
ಈ ಹಿಂದೆಯೇ ನವೆಂಬರ್ ಕ್ರಾಂತಿ ಆಗಲಿದೆ ಎಂಬ ಸುದ್ದಿ ವ್ಯಾಪಕವಾಗಿತ್ತು. ಆದರೆ ಈಗ ನವೆಂಬರ್ ಕ್ರಾಂತಿಗೆ ಸಂಬಂಧಿಸಿದ ಚಟುವಟಿಕೆಗಳು ಆರಂಭವಾಗಿದೆ. ಒಂದು ವೇಳೆ ಅಧಿಕಾರ ಹಂಚಿಕೆ ವಿಚಾರ ಬಂದಲ್ಲಿ ಶಾಸಕರ ಬೆಂಬಲದ ವಿಚಾರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸಕ್ರಿಯರಾಗಿರುವ ಡಿಕೆ ಶಿವಕುಮಾರ್, ಇಬ್ಬರು ಶಾಸಕರ ಜೊತೆ ಮಾತನಾಡಲು ತೆರಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ.