ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು, ಶಿವಕುಮಾರ್ ಸೇರಿದಂತೆ ಎಲ್ಲರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದರು.
ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಮತ್ತು ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಸಿಎಂ ಬದಲಾವಣೆ ಮಾಡಲು ಒತ್ತಡ ಹೇರುವ ನಿಟ್ಟಿನಲ್ಲಿ ದೆಹಲಿಗೆ ತೆರಳಿರುವ ಶಾಸಕರ ಟೀಂಗೂ ಖಡಕ್ ಸಂದೇಶ ರವಾನಿಸಿದ್ದಾರೆ.
ಸಿಎಂ ಆಗಿ ನಾನೇ ಐದು ವರ್ಷಗಳ ಕಾಲ ಮುಂದುವರಿಯುತ್ತೇನೆ. ಇನ್ನು ಎರಡು ಬಜೆಟ್ ನಾನೇ ಮಂಡಿಸುತ್ತೇನೆ. ಆದರೆ ಹೈಕಮಾಂಡ್ ಹೇಳಿದರೆ ನಾನು ಕೇಳಬೇಕು, ಡಿಕೆ ಶಿವಕುಮಾರ್ ಅವರು ಕೇಳಬೇಕು. ಹೈಕಮಾಂಡ್ ಮಾತಿಗೆ ನಾನು ಬದ್ಧ ಎಂದಿದ್ದಾರೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಅವರು "ಸಿದ್ದರಾಮಯ್ಯ ಎಂದಿಗೂ ಮಾತು ತಪ್ಪಲ್ಲ" ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಹೌದು" ನಾನು ಮಾತಿಗೆ ತಪ್ಪಲ್ಲ. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು.
ಶಾಸಕರು ಹೇಳಿಕೆ ಕೊಡುತ್ತಿರುವುದು ಗೊಂದಲಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರವಾಗಿ, ಅದಕ್ಕೆ ಹೈಕಮಾಂಡ್ ಸೂಚನೆ ನೀಡಲಿದೆ. ಹೈಕಮಾಂಡ್ ಸೂಚನೆಯನ್ನು ನಾನು ಆದಿಯಾಗಿ ಎಲ್ಲರೂ ಪಾಲನೆ ಮಾಡಬೇಕು ಎಂದರು.