ಬೆಂಗಳೂರು: ಬಹಳ ದಿನಗಳಿಂದ ಕೇಳಿಬರುತ್ತಿದ್ದ ನವೆಂಬರ್ ಕ್ರಾಂತಿ ವಿಚಾರ ರಾಜ್ಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರವಾಗಿ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.
ಹೌದು.. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಲ್ಲದೇ ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಮಾಧ್ಯಮಗಳ ವಿರುದ್ಧವೇ ಡಿಕೆ ಶಿವಕುಮಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ಸಾಮಾನ್ಯ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ತಾರಕಕ್ಕೇರಿರುವಂತೆಯೇ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ವಾಕ್ಸಮರ ನಡೆಸಿದ್ದಾರೆ.
ತಂದಿಡುವ ಕೆಲಸ ಬೇಡ.. ಮನೆ ಹಾಳು ಕೆಲಸ ಮಾಡಬೇಡಿ
ಡಿ.ಕೆ ಶಿವಕುಮಾರ್ ಅವರು ಎಚ್.ಡಿ ಕುಮಾರಸ್ವಾಮಿ ಮತ್ತು ನನ್ನ ನಡುವೆ ತಂದಿಡುವ ಕೆಲಸವನ್ನು ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. "ಎಚ್.ಡಿ ಕುಮಾರಸ್ವಾಮಿ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಬೇಡಿ. ಈ ಮನೆಹಾಳು ಕೆಲಸ ಯಾಕೆ ಮಾಡುತ್ತೀರಿ ಎಂದೇ ಖಾರವಾಗಿಯೇ ಡಿ.ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಡಿ.ಕೆ ಶಿವಕುಮಾರ್ ಅವರು, ಪತ್ರಕರ್ತರೊಬ್ಬರಿಗೆ 'ಕುಮಾರಸ್ವಾಮಿ ಅವರು ಹೇಳದೆ ಇದ್ದರೂ ಯಾಕೆ ಅವರ ಹೆಸರನ್ನು ಹೇಳುತ್ತಿದ್ದೀರಿ, ಒಬ್ಬರಿಗೊಬ್ಬರಿಗೆ ತಂದಾಕಿ ಮನೆಹಾಳು ಕೆಲಸ ಮಾಡುತ್ತಿದ್ದೀರ ನೀವು' ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರು ಮಹತ್ವದ ಕ್ರಾಂತಿ ಎಂದು ಹೇಳಿರಬಹುದು. ರಾಜಕೀಯವಾಗಿ ಮಾತನಾಡಿರಬಹುದು. ಆದರೆ ಅದೆಲ್ಲಾ ಮುಖ್ಯವಲ್ಲ ಎಂದರು.
ಕೇಂದ್ರ ಸಚಿವ ಅಮಿತ್ ಶಾ ಅವರ ಜೊತೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಟಚ್‌ನಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ನೀವು (ಮಾಧ್ಯಮದವರು) ಪ್ರಶ್ನೆ ಮಾಡುತ್ತಿದ್ದೀರಿ. ಯಾವ ದಾಖಲೆಯ ಮೇಲೆ ಇದನ್ನು ಹೇಳುತ್ತಿದ್ದೀರಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಈ ರೀತಿಯ ಕೆಲಸ ಮಾಡಿ ನೀವು ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನಾವು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇವೆ. ಮುಂದೆ ಈ ರೀತಿ ತಪ್ಪುಗಳನ್ನು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಡಿ.ಕೆ ಶಿವಕುಮಾರ್ ಅವರು ಖಾರವಾಗಿಯೇ ಹೇಳಿದ್ದಾರೆ.