ಬೆಂಗಳೂರು: ರಾಜ್ಯದಲ್ಲಿ ಸಿಎಂ ಗದ್ದುಗೆಗಾಗಿ ಗುದ್ದಾಟ ಹೆಚ್ಚಾಗುತ್ತಿರುವಂತೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತರಾದ ಕೆಲ ಕಾಂಗ್ರೆಸ್ ಶಾಸಕರ ಮೂರನೇ ಬ್ಯಾಚ್ ಹೈಕಮಾಂಡ್ ಮೇಲೆ ಒತ್ತಡ ಹಾಕಲು ರಾತ್ರೋರಾತ್ರಿ ದೆಹಲಿ ತಲುಪಿದೆ.
ಮೂರನೇ ಬ್ಯಾಚ್ ದೆಹಲಿಗೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಂತೆಯೇ ಕೆಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಅಧಿಕಾರ ಹಂಚಿಕೆ ವಿವಾದ ಬಗೆಹರಿಸಲು ವರಿಷ್ಠರ ಮೇಲೆ ಹೊಸ ಒತ್ತಡ ಹೇರಲು ಎರಡು ಬ್ಯಾಚ್ ಶಾಸಕರು ಕಳೆದ ವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈಗ ಎರಡನೇ ಮೂರನೇ ಬ್ಯಾಚ್ ಕಾಂಗ್ರೆಸ್ ಹೈಕಮಾಂಡ್ ಜೊತೆ ತುರ್ತು ಸಭೆ ನಡೆಸಲು ರಾಷ್ಟ್ರ ರಾಜಧಾನಿಗೆ ತೆರಳಿದೆ.
ಬೆಂಗಳೂರಿನಲ್ಲಿಯೇ ಉಳಿದ ಖರ್ಗೆ: ಆರರಿಂದ ಎಂಟು ಶಾಸಕರು ನಿನ್ನೆ ತಡರಾತ್ರಿ ರಾಜಧಾನಿಗೆ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ದೆಹಲಿಗೆ ಪ್ರಯಾಣಿಸುವ ನಿರೀಕ್ಷೆಯಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.
ಖರ್ಗೆ ರಾಜ್ಯ ಸಚಿವರು ಮತ್ತು ಹಿರಿಯ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದ್ದಾರೆ. ಈ ಕ್ಷೀಪ್ರ ಬೆಳವಣಿಗೆಗಳ ನಡುವೆ, ಶಿವಕುಮಾರ್ ಭಾನುವಾರ ಸಂಜೆ ಸಿದ್ದರಾಮಯ್ಯ ಅವರ ಆಪ್ತರಾದ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿದ್ದಾರೆ. ಜಾರ್ಜ್ ಈ ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿ ಮತ್ತು ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
2023 ರ ಮೇ ತಿಂಗಳಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದಾಗ, ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಹಸ್ತಾಂತರಿಸುವುದಾಗಿ ಹೈಕಮಾಂಡ್ ಭರವಸೆ ನೀಡಿತ್ತು ಎಂದು ಶಿವಕುಮಾರ್ ಅವರ ಆಪ್ತ ಕಾಂಗ್ರೆಸ್ ನಾಯಕರು ವಾದಿಸುತ್ತಾರೆ. ಅಧಿಕಾರ ಹಂಚಿಕೆ ಸೂತ್ರದ ಭರವಸೆಯನ್ನು ಗೌರವಿಸುವಂತೆ ಶಿವಕುಮಾರ್ ಪರ ಶಾಸಕರು ಈಗ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಶಾಸಕರು ದೆಹಲಿಗೆ ತೆರಳಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.