ವಾಟಾಳ್ ನಾಗರಾಜ್ 
ರಾಜಕೀಯ

ಸಿಎಂ ಸ್ಥಾನದಿಂದ ಸಿದ್ದು ಕೆಳಗಿಳಿಸುವ ಪ್ರಯತ್ನ: 'ಬೆಂಕಿಯೊಂದಿಗೆ ಸರಸ' ಬೇಡ; ವಾಟಾಳ್ ನಾಗರಾಜ್ ಎಚ್ಚರಿಕೆ!

ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಅಗತ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವುದೇ ಪಕ್ಷದಲ್ಲೂ ಸಿದ್ದರಾಮಯ್ಯರಂತಹ ನಾಯಕರಿಲ್ಲ.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಯಾವುದೇ ಪ್ರಯತ್ನ ಬೆಂಕಿಯೊಂದಿಗೆ ಆಡುವ ಸರಸವಾಗಬಹುದು ಎಂದು ಕನ್ನಡ ಹೋರಾಟಗಾರ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಭಾನುವಾರ ಎಚ್ಚರಿಸಿದ್ದಾರೆ. ಪ್ರಸ್ತುತ ರಾಜ್ಯದ ಯಾವುದೇ ಪಕ್ಷದಲ್ಲಿ ಸಿದ್ದರಾಮಯ್ಯರಂತಹ ಸಾಮರ್ಥ್ಯ ಹೊಂದಿರುವ ನಾಯಕರಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ನಾಗರಾಜ್, ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಅಗತ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವುದೇ ಪಕ್ಷದಲ್ಲೂ ಸಿದ್ದರಾಮಯ್ಯರಂತಹ ನಾಯಕರಿಲ್ಲ. ಅವರು ಅದ್ಭುತ ವಿಚಾರಗಳನ್ನು ಹೊಂದಿರುವ ವ್ಯಕ್ತಿ ಮತ್ತು ಮುಖ್ಯಮಂತ್ರಿಯಾಗಲು ಅಗತ್ಯವಿರುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಎಂದರು.

ಅವರು ಏಳು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಸಮರ್ಥವಾಗಿ ನಡೆಸಿದ್ದಾರೆ. ಅವರನ್ನು ಬದಲಾಯಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕೆಳಗಿಳಿಸುವ ಪ್ರಯತ್ನಗಳು ರಾಜ್ಯವ್ಯಾಪಿ ಅಶಾಂತಿಗೆ ಕಾರಣವಾಗಬಹುದು. ಅವರನ್ನು ಪದಚ್ಯುತಗೊಳಿಸಿದರೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ. ಸಾವಿರಾರು ಜನರು ಜೈಲಿಗೆ ಹೋಗಲು ಸಿದ್ಧರಾಗುತ್ತಾರೆ. ಅಂತಹ ಕ್ರಮವು ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ ಎಂದು ಅವರು ಹೇಳಿದರು.

ದಲಿತ ಮುಖ್ಯಮಂತ್ರಿಯ ಪ್ರಶ್ನೆಗೆ ಉತ್ತರಿಸಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಆ ವಿಚಾರವನ್ನು ಪರಿಗಣಿಸಬಹುದು ಎಂದು ಅವರು ಹೇಳಿದರು. ಸಿದ್ದರಾಮಯ್ಯ 13-14 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಾಂಗ್ರೆಸ್‌ಗೆ ಶಕ್ತಿ ಮತ್ತು ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಸರಗೋಡು ಸಮಸ್ಯೆ ಕುರಿತು ಸಮಾವೇಶ: ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಸಮಾವೇಶ ನಡೆಸಲಿವೆ ಮತ್ತು ಮೂರನೇ ವಾರದಲ್ಲಿ ಗುಂಡ್ಲುಪೇಟೆ-ವಯನಾಡು ಮತ್ತು ಮಂಗಳೂರು-ಕಾಸರಗೋಡು ಮಾರ್ಗಗಳಲ್ಲಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ "ಮಲಯಾಳಂ ಹೇರಿಕೆ" ವಿರೋಧಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕಾಸರಗೋಡಿನಲ್ಲಿ ಮಲಯಾಳಂಗೆ ಆದ್ಯತೆ ನೀಡಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಮಾತನಾಡುವ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು "ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗುತ್ತಿದೆ" ಎಂದು ಅವರು ಆರೋಪಿಸಿದರು.

ಮಂಜೇಶ್ವರ ಗೋವಿಂದ ಪೈ ಮತ್ತು ಕಯ್ಯಾರ ಕಿನ್ಹಣ್ಣ ರೈ ಅವರಂತಹ ದಿಗ್ಗಜರ ನಂತರ ಈ ಪ್ರದೇಶದಲ್ಲಿ ಬಲವಾದ ಕನ್ನಡ ನಾಯಕತ್ವ ಇಲ್ಲದಿರುವುದನ್ನು ಉಲ್ಲೇಖಿಸಿದ ನಾಗರಾಜ್, ಕರ್ನಾಟಕ "ಕಾಸರಗೋಡು ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು ಸಮಾವೇಶದಲ್ಲಿ ಈ ವಿಷಯದ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ಹೆಚ್ಚಾಗಿ ಹೊರಗಿನವರ ಭೂಮಿ: ಕರ್ನಾಟಕ ಹೆಚ್ಚಾಗಿ ಹೊರಗಿನವರ ಭೂಮಿ ಯಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ವಿಶೇಷವಾಗಿ ಐಟಿ-ಬಿಟಿ ವಲಯದಲ್ಲಿ ನೇಮಕಾತಿಯಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸರೋಜಿನಿ ಮಹಿಷಿ ವರದಿಯಲ್ಲಿ ಶಿಫಾರಸು ಮಾಡಿದಂತೆ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT