ಬೆಳಗಾವಿ : ರಾಜ್ಯ ಕಾಂಗ್ರೆಸ್‌ನಲ್ಲಿ ಎದುರಾಗಿರುವ ಸಿಎಂ ಸಂಗೀತ ಕುರ್ಚಿ ವಿಚಾರದಲ್ಲಿ ಹೇಳಿಕೆಗಳು ಮುಂದುವರಿದಿದ್ದಾರೆ. ಪ್ರಮುಖ ನಾಯಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದು, ರಾಜ್ಯದಲ್ಲಿ ಸರಕಾರ ಒಬ್ಬರ ಶ್ರಮದಿಂದಲೇ ಅಧಿಕಾರಕ್ಕೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ನಾನೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಎಂಬ ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್ ಅವರು 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅವರು ಬಹಳಷ್ಟು ಕಾರ್ಯಕ್ರಮ ಮಾಡಿದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ಹೀಗಾಗಿ, ಅವರು ಸಿಎಂ ಹುದ್ದೆ ಅಪೇಕ್ಷಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಸಿಎಂ ರೇಸ್‌ನಲ್ಲಿ ತಾವು ಇದ್ದಿರಾ ಎಂಬ ಪ್ರಶ್ನೆಗೆ, ಅದನ್ನು ಕೇಳಲು ಹೋಗಬೇಡಿ. ಹೇಳುವ ಅವಶ್ಯಕತೆಯೂ ಈಗಿಲ್ಲ ಎಂದರು.
ಇದೇ ವೇಳೆ, ಡಿಕೆಶಿಗೆ ಟಾಂಗ್ ನೀಡಿದ ಜಾರಕಿಹೊಳಿ, ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ.
ರಾಜ್ಯದ ಜನ ಮತ ಹಾಕಿದ್ದರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿ ಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು. 1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಜಗತ್ತಿನ ಎಲ್ಲಾ ಪತ್ರಿಕೆಗಳು ತೇನ್‌ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಆದರೆ, ಅವರ ಹೆಸರು ಬರಲಿಲ್ಲ. ಇದು ಹಾಗೆಯೇ ಆಗಿದೆ ಎಂದು ಹೇಳಿದರು.