ನವದೆಹಲಿ: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಸಂಘರ್ಷ ನಿಭಾಯಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಿಮಿಸಿದೆ.
ಮುಖ್ಯಮಂತ್ರಿ ಹುದ್ದೆಯ ವಿವಾದವನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು. ಈ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ನಾನು ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಹೇಳಿದ್ದಾರೆ.
ಡಿಸೆಂಬರ್ 1 ರಂದು ಸಂಸತ್ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ರಾಜ್ಯದಲ್ಲಿ ನಾಯಕತ್ವದಲ್ಲಿನ ಯಾವುದೇ ಬದಲಾವಣೆಯ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಏತನ್ಮಧ್ಯೆ, ರಾಹುಲ್ ಗಾಂಧಿ ಶಿವಕುಮಾರ್ ಅವರಿಗೆ ಸಂಕ್ಷಿಪ್ತ ವಾಟ್ಸಾಪ್ ಸಂದೇಶದ ಮೂಲಕ ಪ್ರತಿಕ್ರಿಯಿಸಿದ್ದು, "ದಯವಿಟ್ಟು ಕಾಯಿರಿ. ನಾನು ನಿಮಗೆ ಕರೆ ಮಾಡುತ್ತೇನೆ" ಎಂದು ಹೇಳಿರುವುದಾಗಿ ವರದಿಯಾಗಿದೆ.
ಇಂದು ANI ಜೊತೆ ಮಾತನಾಡಿದ ಖರ್ಗೆ, "ಸರ್ಕಾರ ಏನು ಮಾಡುತ್ತಿದೆ ಎಂದು ಅಲ್ಲಿನ ಜನ ಮಾತ್ರ ಹೇಳಬಹುದು. ಆದರೆ ನಾನು ನಿಮಗೆ ಭರವಸೆ ನೀಡಬಲ್ಲೆ, ನಾವು ಈ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ನಾನು ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಅಗತ್ಯವಿರುವ ಯಾವುದೇ ಮಧ್ಯಸ್ಥಿಕೆಯನ್ನು ನಾವು ಒದಗಿಸುತ್ತೇವೆ" ಎಂದು ಹೇಳಿದ್ದಾರೆ.
ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ನಂತರ, 2023 ರಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ "ಅಧಿಕಾರ ಹಂಚಿಕೆ" ಒಪ್ಪಂದವನ್ನು ಉಲ್ಲೇಖಿಸಿ, ಆಡಳಿತ ಪಕ್ಷದೊಳಗೆ ಸಿಎಂ ಪಟ್ಟಕ್ಕಾಗಿ ಫೈಟ್ ತೀವ್ರಗೊಂಡಿದೆ.
ಡಿಕೆ ಶಿವಕುಮಾರ್ ಮಂಗಳವಾರ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ "ನಮ್ಮಲ್ಲಿ ಐದು ಅಥವಾ ಆರು ಜನರ ನಡುವೆ ರಹಸ್ಯ ಒಪ್ಪಂದ ನಡೆದಿದೆ" ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.