ಬೆಂಗಳೂರು: ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಯಾಗಲಿ, ನಾನಾಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆಯಬೇಕೆಂದು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದು, ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಸಲಹೆಗಾರ ಪೊನ್ನಣ್ಣ ಅವರಿಗೆ ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ, ವಿಶ್ವದ ಶಕ್ತಿ) ಎಂದು ಹೇಳುತ್ತಿರುತ್ತೇನೆ. ಮಾತು ಕೊಡುತ್ತೇವೆ, ಆಡುತ್ತೇವೆ. ಅದನ್ನು ನಾನೇ ಕೊಟ್ಟರೂ, ನೀವು ಕೊಟ್ಟರೂ ಅದಕ್ಕೆ ವಿಶ್ವದಲ್ಲೇ ಪವರ್ ಇದೆ. ಅದು ನ್ಯಾಯಾಧೀಶರಾಗಿರಲಿ, ರಾಷ್ಟ್ರಪತಿಯಾಗಿರಲಿ, ನಾನು ಅಥವಾ ಬೇರೆ ಯಾರೇ ಆಗಿರಲಿ, ನಾವು ನಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಸರಿಯಾಗಿ ವಾದ ಮಂಡಿಸದ ವಕೀಲರನ್ನು ಬದಲಿಸಲಾಗುತ್ತದೆ. ವಕೀಲರ ಕಾರ್ಯ ವೈಖರಿ ಪರಿಶೀಲಿಸಲು ವಾದ ಮಂಡನೆಯ ವಿಡಿಯೋವನ್ನು ಪರಿಶೀಲಿಸಲಾಗುತ್ತದೆ. ವಕೀಲರು ಪಕ್ಷದ ಸದಸ್ಯತ್ವ ಹೊಂದಿಲ್ಲದಿದ್ದರೂ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರಬೇಕು.
ಬೆಳಗಾವಿಯಲ್ಲಿ ನಾವು ಮಾಡಿರುವ ಕಾರ್ಯಕ್ರಮಗಳ ಮಾಹಿತಿ ಸೇರಿ ‘ಗಾಂಧಿ ಭಾರತ’ ಎಂಬ ಪುಸ್ತಕ ರಚಿಸಲಾಗಿದೆ. ಆ ಕೃತಿಯ ಶೇ. 95ರಷ್ಟು ಭಾಗ ಪೂರ್ಣಗೊಂಡಿದ್ದು, ಇದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಬಿಜೆಪಿ ನಾಯಕರೊಬ್ಬರು ನನಗೆ ಕರೆ ಮಾಡಿ, ಪೊನ್ನಣ್ಣ ಅವರಿಗೆ ಟಿಕೆಟ್ ನೀಡಬೇಡಿ. ಅವರ ತಂದೆ ಆರ್‌ಎಸ್ಎಸ್‌ನಲ್ಲಿದ್ದರು ಎಂದು ಹೇಳಿದ್ದರು. ಆದರೆ, ನಮ್ಮ ಪಕ್ಷಕ್ಕೆ ಬದ್ಧತೆಯಿಂದ ಪೊನ್ನಣ್ಣ ಕೆಲಸ ಮಾಡುತ್ತಿದ್ದಾರೆ. ಈಗ ಮುಖ್ಯಮಂತ್ರಿಯವರಿಗೆ ಸಲಹೆಗಾರರಾಗಿದ್ದಾರೆ ಎಂದರು.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚುನಾವಣೆ ಅಧ್ಯಯನಕ್ಕೆ ಸಮಿತಿ
ಇಧೇ ವೇಳೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚುನಾವಣೆ ನಡೆಸುವ ಸಂಬಂಧ ಸಮಿತಿ ರಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕ್ಯಾಂಪಸ್ ಚುನಾವಣೆಗಳು ನಾಯಕತ್ವವನ್ನು ಸೃಷ್ಟಿಸುತ್ತದೆ. ಮೊದಲೆಲ್ಲ ಕಾಲೇಜು ಹಂತದಿಂದಲೇ ನಾಯಕರು ಹುಟ್ಟಿಕೊಳ್ಳುತ್ತಿದ್ದರು. ಇದನ್ನು ಅರಿತು ಈಚೆಗೆ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಚುನಾವಣೆ ನಡೆಸಲು ಪತ್ರ ಬರೆದಿದ್ದರು. ಅದನ್ನು ಯಾವ ರೀತಿ ನಡೆಸಬೇಕು ಎಂದು ತೀರ್ಮಾನ ಮಾಡಲು ಸಮಿತಿ ರಚಿಸಲಿದ್ದೇವೆಂದು ಹೇಳಿದರು.
ಹಿಂದೆ ವಿದ್ಯಾರ್ಥಿ ಚುನಾವಣೆಗಳಿಂದ ನಾಯಕತ್ವ ಬೆಳೆಸಲು ಸಾಧ್ಯವಾಗಿತ್ತು. ನಾನು ಅಂತಿಮ ವರ್ಷದ ಪದವಿಯಲ್ಲಿ ಇದ್ದಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿತು. ಕಾಂಗ್ರೆಸ್ ಪಕ್ಷದ ಹಲವು ನಾಯಕರು ವಿದ್ಯಾರ್ಥಿ ಹೋರಾಟದಿಂದಲೇ ಬಂದವರು. ಆದರೆ, ವಿದ್ಯಾರ್ಥಿ ಚುನಾವಣೆಗಳಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದವು. ಅವುಗಳನ್ನು ನಿಯಂತ್ರಿಸುವ ಅಗತ್ಯವಿದೆ. ಈ ಕುರಿತು ವರದಿ ಬಂದ ನಂತರ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.