ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನಗೊಂಡಿದ್ದೇ ಆದರೆ, ಡಿಕೆ.ಶಿವಕುಮಾರ್ ಅವರು ಬಿಜೆಪಿಯನ್ನು ಸಂಪರ್ಕಿಸಿದರೆ ಬೆಂಬಲ ನೀಡಲು ಸಿದ್ಧರಿದ್ದೇವೆಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟರೆ ಒಪ್ಪುತ್ತೇವೆ. ಆದರೆ, ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಅದು ಕೇಂದ್ರದ ನಿರ್ಧಾರಕ್ಕೆ ಬಿಟ್ಟ ವಿಚಾರ. ಅಲ್ಲದೇ ಕೇಂದ್ರದ ವರಿಷ್ಠರು ಅವರನ್ನೇ ಮುಖ್ಯಮಂತ್ರಿ ಮಾಡಲು ಸೂಚಿಸಿದರೆ ಬೆಂಬಲ ಕೊಡುತ್ತೇವೆಂದು ಹೇಳಿದರು.
ಶಿಡ್ಲಘಟ್ಟದಲ್ಲಿ ಸೋಮವಾರ ಸಿದ್ದರಾಮಯ್ಯ ಅವರು 2,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಕುರಿತು ಪ್ರತಿಕ್ರಿಯಿಸಿ, ಇವು ಕೇವಲ ಘೋಷಣೆಗಳಷ್ಟೇ. ಸರ್ಕಾರದ ಬಳಿ ಹಣವಿದ್ದರೆ ಬೆಂಗಳೂರಿನ ಗುಂಡಿಗಳನ್ನು ಮುಚ್ಚುತ್ತಿತ್ತು ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಸತ್ತು ಹೋಗಿದೆ. ರಾಜ್ಯದ ಜನರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ರೈತರ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಆದ್ದರಿಂದ ಈ ಸರ್ಕಾರ ಇರಬಾರದು ಎಂದು ತಿಳಿಸಿದರು.