ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿದ್ದು, ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ಕರೆಯುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಹೇಳಿದ್ದಾರೆ.
ದೆಹಲಿಯ ಇಂದಿರಾ ಕಾಂಗ್ರೆಸ್ ಭವನದಲ್ಲಿ ಹೈಕಮಾಂಡ್ ಸಭೆ ನಿಗದಿಯಾಗಿರುವ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿನಿಂದ ದೆಹಲಿಗೆ ತೆರಳಿದರು.
ದೆಹಲಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆಯವರು, ನಾನು ಎಲ್ಲರನ್ನೂ ಕರೆಸಿ ಚರ್ಚೆ ಮಾಡ್ತೇನೆ. ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಇರ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಇಬ್ಬರೂ ಇರುತ್ತಾರೆ. ಹೈಕಮಾಂಡ್ ಅಂದರೆ ಏಕಾಂಗಿ ಅಲ್ಲ. ಒಂದು ಟೀಮ್. ಹೈಕಮಾಂಡ್ ಟೀಮ್ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದರು.
ದೆಹಲಿಯ ಕಾಂಗ್ರೆಸ್ ಭವನದಲ್ಲಿಂದು ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ನಡೆಯಲಿದ್ದು, ಯಾರು ಸಿಎಂ ಬೇಕು ಅನ್ನೋದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಸಭೆಯಲ್ಲಿ ಹಾಜರಿರಲಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಕತ್ವ ಗದ್ದಲದ ಮಧ್ಯೆ, ಸಿದ್ದರಾಮಯ್ಯ ಅವರು ಗುರುವಾರ ತಮ್ಮ ನಿವಾಸದಲ್ಲಿ ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ ಹಿರಿಯ ಸಚಿವರು ಮತ್ತು ಆಪ್ತ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.