ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಥಿರತೆಯ ಭಾವನೆ ಕಾಡುತ್ತಿದ್ದು, ಹೀಗಾಗಿಯೇ ಇನ್ನೂ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಥಿರತೆಯ ಕಾರಣದಿಂದ ಸಿದ್ದರಾಮಯ್ಯ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ನಾನೇ ಸಿಎಂ ಇರುತ್ತೇನೆಂದು ಹೇಳುವುದು ಅಸ್ಥಿರತೆಯ ಮೊದಲ ಲಕ್ಷಣ ಎಂದಿದ್ದಾರೆ. ಯಾಕೆ ಅವರಿಗೆ ವಿಶ್ವಾಸವಿಲ್ಲವಾ? ಬದುಕಿದ್ದವನು, ನಾನು ಬದುಕಿದ್ದೇನೆ ಬದುಕಿದ್ದೇನೆ ಎಂದು ಯಾಕೆ ಹೇಳುತ್ತಾನೆ. ನಾನು ಸತ್ತಿಲ್ಲ, ಬದುಕಿದ್ದೇನೆ ಅಂತ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ಜಾತಿ ಗಣತಿ ಕುರಿತು ಮಾತನಾಡಿ, ಕ್ರಾಂತಿ ಸ್ವಲ್ಪ ಆ ಕಡೆ, ಈ ಕಡೆ ಆಗಬಹುದು. ಕ್ರಾಂತಿ ಬಗ್ಗೆ ಕಾಂಗ್ರೆಸ್‌ನವರೇ ಹೇಳಿದ್ದಾರೆ. ಅದನ್ನು ತಪ್ಪಿಸಲು ಜಾತಿ ಗಣತಿ ಆರಂಭಿಸಿದ್ದಾರೆ. ಮುಜಾವರ್ ಮುಸ್ಲಿಂ ಬ್ರಾಹ್ಮಣ ಎಂದು ಸೇರಿಸಿದ್ದಾರೆ. ಅದನ್ನು ಎಲ್ಲಿಂದ ತಂದಿದ್ದಾರೆಂದು ಪ್ರಶ್ನಿಸಿದರು.
ಇದೇ ವೇಳೆ ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ದೂರುವ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಅವರು, ಯುಪಿಎ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಪಾಲು ಸಿಕ್ಕಿತು ಎಂಬುದನ್ನು ಅವರು ವಿವರಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರಗಳು ಕೇಳುವ ಮೊದಲೇ ಕೇಂದ್ರ ಸರ್ಕಾರ ಹಣವನ್ನು ಒದಗಿಸುತ್ತದೆ, ಆದರೆ ಕಾಂಗ್ರೆಸ್ ಪಕ್ಷ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ, ರಾಜ್ಯಗಳು ಕೇಂದ್ರದಿಂದ ತಮ್ಮ ಪಾಲನ್ನು ಪದೇ ಪದೇ ಕೇಳಬೇಕಾಗಿತ್ತು. ಪ್ರಸ್ತುತ ರಾಜ್ಯ ಸರ್ಕಾರವು ಹಣಕಾಸಿನ ದುರುಪಯೋಗದ ಆರೋಪ ಮಾಡಿದೆ. ಅದು ಕೇಂದ್ರ ಸರ್ಕಾರವನ್ನು ಅನ್ಯಾಯವಾಗಿ ದೂಷಿಸುತ್ತಿದೆ ಎಂದು ತಿಳಿಸಿದರು.