ಕೊಪ್ಪಳ: ಕಾಂಗ್ರೆಸ್‌ನ ಒಳ ರಾಜಕೀಯದ ಬಗ್ಗೆ ಮತ್ತೊಬ್ಬ ಮಸ್ಲಿಂ ಮುಖಂಡ ಇಕ್ಬಾಲ್ ಅನ್ಸಾರಿ ಸಿಡಿದೆದ್ದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಮುಖಂಡರ ವಿರುದ್ಧ ಕೆಂಡ ಕಾರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಯಲಬುರ್ಗಾ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮೋಸಗಾರರು, ಕಾಂಗ್ರೆಸ್ ಹೈಕಮಾಂಡ್ ಮುಂದೆ ಸುಳ್ಳು ಹೇಳಿ ಜನತೆಗೆ ಮತ್ತು ತನಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಖ್ಯಮಂತ್ರಿ ಕೊಪ್ಪಳಕ್ಕೆ ಆಗಮಿಸುವ ದಿನವೇ ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನ ಹೊರ ಹೊರಹಾಕಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಮಾಜಿ ಸಚಿವನಾಗಿದ್ದರೂ, ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ದೂರ ಇಟ್ಟಿದ್ದಾರೆ. ಪಕ್ಷದ ನಾಯಕರೂ ಕೂಡ ಕಡೆಗಣಿಸಿದ್ದಾರೆ ಎಂದು ಆಡಿಯೋ ಸಂದೇಶದಲ್ಲಿ ಇಕ್ಬಾಲ್ ಅನ್ಸಾರಿ ಅಳಲು ತೋಡಿಕೊಂಡಿದ್ದಾರೆ.
ಹಿಟ್ನಾಳ್ ಕುಟುಂಬದ ಸಂಸದರು, ಶಾಸಕರು, ಕನಕಗಿರಿ ಕ್ಷೇತ್ರದಿಂದ ಗೆದ್ದು ಸಚಿವರಾಗಿರುವ ಶಿವರಾಜ ತಂಗಡಗಿ, ಮತ್ತು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಜಿಲ್ಲೆಯಲ್ಲಿ ನಡೆಯುವ ಸತ್ಯ ಸಂಗತಿಗಳನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಪ್ಪಳದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಗಳನ್ನು ಬಿಡಲಾಗಿದೆ. ನನ್ನ ಗುಂಪಿನ ನಾಯಕರು ಬಸ್ಸಿನಲ್ಲಿ ಜನರನ್ನು ಕಳುಹಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಗೆದ್ದವರು ಅನ್ಸಾರಿ ಜನರನ್ನು ಕಳಿಸಿಲ್ಲ ಎಂದು ಸಿಎಂ ಅವರಿಗೆ ಹೇಳುತ್ತಾರೆ.
ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬರುತ್ತಿರುವ ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಪ್ರತಿಯೊಂದು ಗ್ರಾಮದ ಫಲಾನುಭವಿಗಳನ್ನು ನಮ್ಮ ಬೆಂಬಲಿಗ ಕಾರ್ಯಕರ್ತರು ಕರೆದುಕೊಂಡು ಹೋಗಬೇಕು. ಮುಖ್ಯಮಂತ್ರಿ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಅತ್ಯುತ್ತಮ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಐದು ಗ್ಯಾರಂಟಿ ಗಿನ್ನೆಸ್ ದಾಖಲೆಯಾಗಿದೆ. ಇದನ್ನು ನಾವೆಲ್ಲರು ತುಂಬು ಹೃದಯದಿಂದ ಸ್ವಾಗತಿಸಿ ಮುಖ್ಯಮಂತ್ರಿಯ ಕಾರ್ಯಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಕೊಪ್ಪಳ ಜಿಲ್ಲೆಯ ಸಚಿವ, ಸಂಸದ, ಶಾಸಕ ಮತ್ತು ಆರ್ಥಿಕ ಸಲಹೆಗಾರ ಮಾಡಿರುವ ಮೋಸವನ್ನು ಸಹಿಸುವುದಿಲ್ಲ. ಅವರು ನನ್ನ ಬಗ್ಗೆ ಮುಖ್ಯಮಂತ್ರಿ ಬಳಿ ಸುಳ್ಳಿನ ಕಂತೆ ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ವಿರುದ್ಧ ಗುಂಪು ಕಟ್ಟಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಈ ರೀತಿಯ ಹುನ್ನಾರಗಳ ಬಗ್ಗೆ ನಾನು ರಾಜ್ಯದಾದ್ಯಂತ ಮುಸ್ಲಿಂ ಸಮುದಾಯಕ್ಕೆ ವಿವರಿಸುತ್ತೇನೆ. ಕೊಪ್ಪಳ ಜಿಲ್ಲೆ ಕುರಿತಂಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಆ ಗುಂಪಿನವರ ಮಾತುಗಳನ್ನು ಕೇಳಿ, ಏಕಮುಖ ನಿರ್ಧಾರ ಮಾಡಬೇಡಿ, ನನ್ನ ಅಭಿಪ್ರಾಯಗಳನ್ನೂ ಕೇಳಿ ಎಂದು ಮುಖ್ಯಮಂತ್ರಿ ಅವರಿಗೆ ಅನ್ಸಾರಿ ಮನವಿ ಮಾಡಿಕೊಂಡಿದ್ದಾರೆ.