ಬೆಂಗಳೂರು: ಆರ್‌ಎಸ್‌ಎಸ್ "ವಿಶ್ವದ ಅತ್ಯಂತ ರಹಸ್ಯ ಸಂಘಟನೆ" ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅದು ನೋಂದಾಯಿಸಿಕೊಂಡಿಲ್ಲ. ಆದರೂ ಇನ್ನೂ ನೂರಾರು ಕೋಟಿ ರೂಪಾಯಿ ಮೌಲ್ಯದ ಹಣವನ್ನು ಪಡೆಯುತ್ತಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ರಾಜ್ಯದಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಎಲ್ಲಾ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಕೋರಿ ಖರ್ಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ, "ಆರ್ ಎಸ್ಎಸ್ ವಿಶ್ವದ ಅತ್ಯಂತ ರಹಸ್ಯ ಸಂಘಟನೆ. ಇಷ್ಟೊಂದು ಗೌಪ್ಯತೆ ಏಕೆ? ಈ ಜನರು ಯಾರು? ಆರ್‌ಎಸ್‌ಎಸ್ ಮುಖ್ಯಸ್ಥರ ಭಾಷಣದ ನೇರ ಪ್ರಸಾರ ಏಕೆ? ಈ ದೇಶಕ್ಕೆ ಅವರ ಕೊಡುಗೆ ಏನು? ಅವರು ತಮ್ಮ 100 ವರ್ಷಗಳ ಅಸ್ತಿತ್ವದಲ್ಲಿ ತಮ್ಮ ಹತ್ತು ಕೊಡುಗೆಗಳನ್ನು ನನಗೆ ತಿಳಿಸಲಿ. ಬಿಜೆಪಿ ಆರ್‌ಎಸ್‌ಎಸ್‌ನ 'ಕೈಗೊಂಬೆ' ಎಂದು ಆರೋಪಿಸಿದರು.
"ನೀವು ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಇಲ್ಲ. ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮವಿಲ್ಲದೆ ಆರ್‌ಎಸ್‌ಎಸ್ ಶೂನ್ಯ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ವಾಗ್ದಾಳಿ ನಡೆಸಿದರು.
ನಾನು ಹಿಂದೂಗಳು ಅಥವಾ ಹಿಂದೂ ಧರ್ಮದ ವಿರೋಧಿಯಲ್ಲ. ನಾನು ಆರ್‌ಎಸ್‌ಎಸ್ ಮತ್ತು ಅದರ ಸಿದ್ಧಾಂತವನ್ನು ಮಾತ್ರ ವಿರೋಧಿಸುತ್ತೇನೆ ಎಂದು ಖರ್ಗೆ ಹೇಳಿದರು.
"ನಾನು ಆರ್‌ಎಸ್‌ಎಸ್ ಅನ್ನು ವಿರೋಧಿಸುತ್ತೇನೆ. ಅದರ ಸಿದ್ಧಾಂತವು ಸಮಾನತೆಯನ್ನು ಒಪ್ಪುವುದಿಲ್ಲ ಮತ್ತು ನಮ್ಮ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಅದು ಮನು ಸ್ಮೃತಿಯನ್ನು ಬಯಸುತ್ತದೆ" ಎಂದು ಖರ್ಗೆ ಪ್ರತಿಪಾದಿಸಿದರು.
ಯಾವ ಸಂಘಟನೆ ಒಂದು ರಾಷ್ಟ್ರದ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ, ಒಂದು ರಿಜಿಸ್ಟ್ರೇಷನ್ ಕೂಡ ಮಾಡಿಸದಿದ್ದರೆ ಅವರು ದೇಶ ಭಕ್ತರು ಹೇಗಾಗುತ್ತಾರೆ? ಮೋಹನ್ ಭಾಗವತ್ಗೆ ಅಷ್ಟು ಸೆಕ್ಯೂರಿಟಿ ಯಾಕೆ ಬೇಕು? ಗೃಹ ಸಚಿವರಿಗೆ ಇರುವಷ್ಟು ಭದ್ರತೆ ಮೋಹನ್ ಭಾಗವತ್ಗೆ ಯಾಕೆ ಬೇಕು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸರ್ದಾರ್ ಪಟೇಲ್ ಅವರು RSS ಬ್ಯಾನ್ ಮಾಡಿದ್ದರು. ಇತಿಹಾಸದ ಪುಟವನ್ನ ತಿರುಗಿಸಿ ಓದಲಿ. ಸಂಘ ಪರಿವಾರದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ದರು. ನಾವು ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ ಎಂದು ಕ್ಷಮೆ ಕೋರಿದ್ದಕ್ಕೆ ಆರ್ ಎಸ್ ಎಸ್ ಬ್ಯಾನ್ ತೆರವು ಮಾಡಲಾಗಿತ್ತು ಎಂದು ಖರ್ಗೆ ಹೇಳಿದರು.