ಹಾಸನ: ಸಂಪುಟ ಸಹೋದ್ಯೋಗಿಗಳಿಗೆ ನಾನು ಮೊನ್ನೆ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆಗಾಗ ಹೀಗೆ ಪಾರ್ಟಿ ಕೊಡುತ್ತಿರುತ್ತೇನೆ, ಆಗಾಗ ಸೇರುತ್ತೀವಿ, ಊಟ ಮಾಡುತ್ತೀವಿ, ಗೆಟ್ ಟುಗೆದರ್ ಮಾಡುತ್ತಿರುತ್ತೇವೆ, ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತೀವೆ, ಅದು ಬಿಟ್ಟರೆ ಔತಣಕೂಟದಲ್ಲಿ ನಾಯಕತ್ವ ಬದಲಾವಣೆಯಾಗಲಿ, ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಹೈಕಮಾಂಡ್ ಈಗ ಬಿಹಾರ ಚುನಾವಣೆ ಮೇಲೆ ಗಮನ ಹರಿಸಿದ್ದಾರೆ. ಆಮೇಲೆ ಹೈಕಮಾಂಡ್ ಏನು ಹೇಳುತ್ತಾರೆ ನೋಡೋಣ ಎಂದರು.
ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ
ನವೆಂಬರ್ ನಲ್ಲಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಯಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆಯಲ್ಲವೇ ಎಂದು ಸುದ್ದಿಗಾರರು ಕೇಳಿದಾಗ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಯಾವ ಶಾಸಕರೂ ಇದರ ಬಗ್ಗೆ ಅಪಸ್ವರ, ಕೂಗು ಎತ್ತುತ್ತಿಲ್ಲ, ಎಲ್ಲ ನೀವೇ ಊಹಿಸಿಕೊಳ್ಳುತ್ತಿದ್ದೀರಷ್ಟೆ ಎಂದರು.
ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ನಿಷೇಧ ವಿಚಾರದ ಬಗ್ಗೆ ಕೇಳಿದಾಗ ಆರ್ ಎಸ್ ಎಸ್ ಮಾತ್ರವಲ್ಲ ಯಾವುದೇ ಸಂಘಟನೆಗಳು ಶಾಲೆ, ಕಾಲೇಜು ಆವರಣದಲ್ಲಿ, ಪಾರ್ಕ್ ಗಳು ಅಥವಾ ಇತರ ಸಾರ್ವಜನಿಕ ಜಾಗದಲ್ಲಿ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಹೇಳಿದ್ದೇವೆ. ತಮಿಳು ನಾಡು ಸರ್ಕಾರ ಯಾವ ರೀತಿ ನಿಷೇಧ ಹೇರಿದೆ ಎಂದು ತಿಳಿದುಕೊಳ್ಳಲು ವರದಿ ತರಿಸಿಕೊಳ್ಳುತ್ತಿದ್ದೇವೆ ಎಂದರು.