ಬೆಂಗಳೂರು: 2018ರಲ್ಲಿ ಏನು ನಡೆದಿತ್ತು ಎಂಬುದನ್ನು ನಿಮ್ಮ ತಂದೆಯಿಂದ ಕೇಳಿ ತಿಳಿದುಕೊಳ್ಳಿ ಎಂದೇ ಹೇಳುವ ಮೂಲಕ ಅಧಿಕಾರಕ್ಕಾಗಿ ಜೆಡಿಎಸ್ ಕೇಸರೀಕರಣವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು, ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದಿದ್ದು ಅವರಿಗೆ ಗೊತ್ತಿರಲಿಲ್ಲವೇ ಎಂದು ಕಿಡಿಕಾರಿದರು.
ಅಧಿಕಾರಕ್ಕಾಗಿ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್. ಅವತ್ತು ಏನೇನು ನಡೆಯಿತು ಎನ್ನುವುದನ್ನು ಅವರು ತಮ್ಮ ತಂದೆಯನ್ನು ಕೇಳಿ ತಿಳಿದುಕೊಳ್ಳಲಿ. ಬೆಂಗಳೂರಿನಲ್ಲಿ ರಾಜಕೀಯ ಮಾಡುವ ಬದಲು ತಮ್ಮ ಜಿಲ್ಲೆಯಲ್ಲಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನವರು ಮಾತೆತ್ತಿದರೆ ತಾಜ್ ಹೋಟೆಲ್ ನಲ್ಲಿ ಇದ್ದೆ ಅಂತಾರೆ. ನಾನು ತಾಜ್ ಹೊಟೇಲಿನಲ್ಲಿ ಮಲಗಿದ್ದರೆ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡೋಕೆ ಆಗುತ್ತಿತ್ತಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರಿಗೆ ನಾನು ಸಿಎಂ ಅಗಿದ್ದಾಗ ಅಭಿವೃದ್ದಿಗಾಗಿ 19 ಸಾವಿರ ಕೋಟಿ ಅನುದಾನವನ್ನು ಒಂದೇ ವರ್ಷದಲ್ಲಿ ಕೊಟ್ಟಿದ್ದೆ. ಇವತ್ತು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಇದ್ದಾಗ ಏನು ಕೊಟ್ಟರು ಅಂತ ಚರ್ಚೆ ಮಾಡುತ್ತಾರೆ. ದಾಖಲೆ, ಅಂಕಿ ಅಂಶಗಳು ಅವರ ಬಳಿಯೇ ಇವೆ. ಮೊದಲು ನೋಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ನನ್ನ ಬಗ್ಗೆ ಮತ್ತು ನನ್ನ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಪ್ರಿಯಾಂಕ್ ಖರ್ಗೆ ಅವರಿಗಿಲ್ಲ. ರೈತರ ಸಂಕಷ್ಟದ ಬಗ್ಗೆ ಮಾತನಾಡುವಾಗ ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ 40 ಎಕರೆ ಜಮೀನು ಹಾಳಾದ ಬಗ್ಗೆ ಅಳಲು ತೋಡಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ, ರಾಜಕೀಯದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಪ್ರಿಯಾಂಕ್ ಖರ್ಗೆ ಅವರಿಂದ ಕಲಿಯಬೇಕೆ ಎಂದು ಪ್ರಶ್ನಿಸಿದರು.
ಜನರು 136 ಸ್ಥಾನಗಳನ್ನು ನೀಡಿದ್ದರೂ, ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ. ಕಲಬುರಗಿಯಲ್ಲಿ ಜನ ಬೀದಿಯಲ್ಲಿದ್ದರೂ, ರೈತರು ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಏನು ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಯಾವ ಯಾವ ರೀತಿ ಬೆನ್ನಿಗೆ ಚಾಕು ಹಾಕಿದ್ದಾರೆ. ಯಾರು ಯಾರನ್ನು ಅಧಿಕಾರದಿಂದ ತೆಗೆದ್ರು ದೇಶದಲ್ಲಿ?. ಚರಣ್ ಸಿಂಗ್ಗೆ ಪಾರ್ಲಿಮೆಂಟ್ ನಡೆಸೋಕೆ ಬಿಡಲಿಲ್ಲ. ಚಂದ್ರಶೇಖರ್, ಎಷ್ಟು ಜನರನ್ನು ತೆಗೆದರು?. ಅವರ ರಾಜಕೀಯ ಭವಿಷ್ಯನೇ ಹಾಳು ಮಾಡಿದ್ರಿ. ದೇವೇಗೌಡರ ರಾಜಕೀಯ ನಿರ್ನಾಮ ಮಾಡಿದ್ದೆ ಕಾಂಗ್ರೆಸ್. ಇವರಿಂದ ನಾನು ಕಲಿಯಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದು ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಯಾವುದೇ ಚರ್ಚೆ ಇಲ್ಲ. ಸದ್ಯಕ್ಕೆ ನಾನೇ ತಾತ್ಕಾಲಿಕ ರಾಜ್ಯಾಧ್ಯಕ್ಷ ಇದ್ದೇನೆ. ಇದರ ಅವಶ್ಯಕತೆ ಇಲ್ಲ ಅಂತ ಒಂದು ವಿಂಗ್ ಇದೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ಕೊಟ್ಟರೆ, ಓಡಾಟ ಮಾಡಿ ಸಂಘಟನೆ ಮಾಡುತ್ತಾರೆ ಅಂತಾರೆ. ಅದರೆ, ಇದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಬೆಂಗಳೂರು ಮತ್ತು ರಾಜ್ಯಕ್ಕೆ ಸಮನ್ವಯ ಸಮಿತಿಗಳನ್ನು ರಚಿಸಲಿವೆ. ಸುಮಾರು 10 ದಿನಗಳಲ್ಲಿ ನಾವು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಕೋರ್ ಕಮಿಟಿ ಪುನಾರಚನೆಯ ಕುರಿತು ಮಾತನಾಡಿ, ನಮ್ಮ ಪಕ್ಷವು ಈಗಾಗಲೇ ಈ ಕುರಿತು ಸಭೆ ನಡೆಸಿದೆ. ಕೋರ್ ಕಮಿಟಿ ಮತ್ತು ಪಾಲಿಕೆ ಚುನಾವಣೆಗಳಿಗೆ ಸಂಬಂಧಿಸಿದಂತೆ ಪಕ್ಷದ ಸಂಘಟನೆಗಾಗಿ ಸಮಿತಿಯನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.