ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಒತ್ತಾಯದ ಮೇರೆಗೆ ತುಮಕೂರಿನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಈ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸಾಕಾಗುವಷ್ಟು ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ನಂತರ ತುಮಕೂರಿನಿಂದ ಮತ್ತೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ನನಗೆ ನೀಡುವ ಸೂಚನೆಯಂತೆ ನಡೆಯುತ್ತೇನೆಂದು ಸೋಮಣ್ಣ ಅವರು ಹೇಳಿದ್ದಾರೆ.
ಸೋಮಣ್ಣ ಅವರ ಈ ಹೇಳಿಕೆ, 2028ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆಂಬ ಗುಸುಗುಸುಗಳು ಶುರುವಾಗಿದೆ.
ಸೋಮಣ್ಣ ವೀರಶೈವ-ಲಿಂಗಾಯತ ಸಮುದಾಯದಿಂದ ಬಂದಿದ್ದು, ಕೇಂದ್ರ ಸಚಿವರಾದ ನಂತರ, ಸಮುದಾಯದ ಪ್ರಮುಖ ನಾಯಕರಾಗಿ ಅವರ ಪ್ರಭಾವ ಹಲವು ಪಟ್ಟು ಹೆಚ್ಚಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಕೇವಲ ವೀರಶೈವ-ಲಿಂಗಾಯತ ಸಮುದಾಯವಷ್ಟೇ ಅಲ್ಲದೆ, ಇತರೆ ಸಮುದಾಯಗಳ ನಾಯಕರು ಕೂಡ ಸೋಮಣ್ಣ ಅವರನ್ನು ಒಪ್ಪಿಕೊಂಡಿದ್ದಾರೆ. ಲಿಂಗಾಯತ ನಾಯಕ ಬಿ.ಎಸ್. ಯಡಿಯೂರಪ್ಪ ಅವರಂತೆಯೇ, ಸೋಮಣ್ಣ ಕೂಡ ಸಮುದಾಯಗಳ ಮಠಗಳ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಇದಲ್ಲದೆ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಿಪೋರ್ಟ್ ಕಾರ್ಡ್ ಸಲ್ಲಿಸಿದ ನಂತರ ಸೋಮಣ್ಣ ಅವಪಕಾರ್ಯಕ್ಷಮತೆ ಬಿಜೆಪಿ ಹೈಕಮಾಂಡ್‌ನ ಗಮನ ಸೆಳೆದಿದೆ ಎಂದು ಎಸ್‌ಸಿ ಸಮುದಾಯದ ಶಾಸಕರೊಬ್ಬರು ಹೇಳಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರು ಹೈಕಮಾಂಡ್ ಆದೇಶವನ್ನು ಅನುಸರಿಸಿ ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ, ಈ ಎರಡೂ ಕ್ಷೇತ್ರಗಳಲ್ಲೂ ಸೋಲು ಕಂಡಿದ್ದರು. ಇದು ರಾಜ್ಯ ರಾಜಕೀಯ ಭವಿಷ್ಯದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡಿತ್ತು. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದ್ದರು. ಈ ಚುನಾವಣೆಯ ಗೆಲವು ಮೂಲಕ ರಾಜಕೀಯದಲ್ಲಿ ಪುನರ್ಜನ್ಮ ಸಿಗುವಂತೆ ಮಾಡಿದ್ದರು.
ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರೊಂದಿಗಿನ ಸೋಮಣ್ಣ ಅವರ ಉತ್ತಮ ಸಂಬಂಧವು ಸೋಮಣ್ಣ ಅವರ ಗೆಲುವಿಗೆ ಸಹಾಯ ಮಾಡಿತು ಎನ್ನಲಾಗಿದೆ.
ಈ ನಡುವೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಾಯಿಸಬೇಕಾದರೆ, ಹೈಕಮಾಂಡ್ ಯಡಿಯೂರಪ್ಪ ಕುಟುಂಬವನ್ನು ಸಮಾಧಾನಪಡಿಸಲು ಅವರ ಮತ್ತೊಬ್ಬ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.