ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸುಳ್ಳು, ಒಗ್ಗಟ್ಟಿನಿಂದ ಹೋರಾಡಿದರೆ ಸರ್ಕಾರ ರಚಿಸುವುದು ನಿಶ್ಚಿತ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ಹೇಳಿದರು.
ಗುರುವಾರ ನಗರದ ಯಲಹಂಕ ಬಳಿಯ ರೆಸಾರ್ಟ್ ವೊಂದರಲ್ಲಿ ಆರಂಭಗೊಂಡ 2 ದಿನಗಳ ರಾಜಕೀಯ ಚಿಂತನ ಶಿಬಿರ ಉದ್ಘಾಟಿಸಿ ಧರ್ಮೇಂದ್ರ ಫ್ರಧಾನ್ ಅವರು ಮಾತನಾಡಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸುಳ್ಳು. ಮನಸ್ಸು ಮಾಡಿದರೆ ಅಧಿಕಾರಕ್ಕೆ ಬರಲು ಸಾಧ್ಯ. ಏನೇ ಬಂದರೂ ಒಗ್ಗಟ್ಟಾಗಿರಬೇಕು. ಒಂದಾಗಿ ಹೋರಾಟ ಮಾಡಬೇಕು. ಪಕ್ಷದ ವರ್ಚಸ್ಸು ಹೆಚ್ಚಿಸಬೇಕು. ಆಗ ಜನರ ಬೆಂಬಲ ತಾನಾಗಿಯೇ ಲಭಿಸುತ್ತದೆ ಎಂದು ಹೇಳಿದರು.
ಈ ಹಿಂದೆ ಎರಡು ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳು ಪಕ್ಷಕ್ಕೆ ಲಭಿಸಿವೆ. ಇತರರ ನೆರವಿನಿಂದ ಸರ್ಕಾರ ರಚಿಸಿದರೂ ಉತ್ತಮ ಆಡಳಿತ ನೀಡಲಾಗಿದೆ. ರಾಜ್ಯ ಘಟಕದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಬೇಕಿದೆ. ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಸಾಗಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಯಬೇಕು ಎಂದು ತಿಳಿಸಿದರು ಎಂದು ವರದಿಗಳಿಂದ ತಿಳಿದುಬಂದಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಅವರು, ಎರಡು ದಿನಗಳ ಸಭೆಯಲ್ಲಿ ಬಿಜೆಪಿ ಶಾಸಕರು, ಸಂಸದರು ಮತ್ತು ಇತರ ಹಿರಿಯ ನಾಯಕರು ಭಾಗವಹಿಸಲಿದ್ದು, ರಾಜ್ಯ ಸರ್ಕಾರದ "ವೈಫಲ್ಯಗಳ" ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ಹೇಳಿದರು.