ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದುಬಿದ್ದು, ಮಗು ಸೇರಿ 7 ಮಂದಿ ಸಾವನ್ನಪ್ಪಿದ್ದು, ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿ, ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಮಕ್ಕಳು ಸೇರಿ ಏಳು ಜನರು ದುರ್ಮರಣಕ್ಕೆ ತುತ್ತಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಈ ಹೃದಯವಿದ್ರಾವಕ ದುರಂತ ನನ್ನ ಮನ ಕಲಕಿದೆ.
ಮೃತರ ಕುಟುಂಬಗಳಿಗೆ ನನ್ನ ಪ್ರಗಾಢ ಸಂತಾಪಗಳು ಹಾಗೂ ರಾಜ್ಯ ಸರಕಾರವು ಗಾಯಾಳುಗಳಿಗೆ ಎಲ್ಲಾ ಬಗೆಯ ತುರ್ತುಚಿಕಿತ್ಸೆ ನೀಡಿ ಅವರ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು ಮತ್ತು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಪ್ರತಿ ಬಾರಿ ಮಳೆ ಬಂದಾಗಲೂ ದುರಂತಗಳು ಸಂಭವಿಸುತ್ತಿವೆ. ಸರಕಾರ ಪಾಠ ಕಲಿಯುತ್ತಿಲ್ಲ. ನಗರದಲ್ಲಿ ಇಂತಹ ಅನಾಹುತಗಳು ಸಂಭವಿಸಿದಂತೆ ಶಾಶ್ವತ ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ. ಇಷ್ಟಕ್ಕೂ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದಿದ್ದು ಹೇಗೆ? ಅದನ್ನು ಯಾವಾಗ ನಿರ್ಮಿಸಿದ್ದರು? ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದು ಯಾರ ನಿರ್ಲಕ್ಷ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರವು ಮೃತರ ಕುಟುಂಬಗಳ ನೆರವಿಗೆ ಧಾವಿಸುವುದು ಎಂದರೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದಲ್ಲ. ಇಂತಹ ಘೋರ ಘಟನೆಗಳು ಮರುಕಳಿಸದಂತೆ ಕಠಿಣ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ನಿರ್ವಹಣೆ, ಕಟ್ಟೆಚ್ಚರ ಎಂದರೆ ನಿರಂತರ ಪ್ರಕ್ರಿಯೆ. ಆದರೆ, ಇಲ್ಲಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರತಿಕ್ರಿಯೆ ನೀಡಿ, ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಮಂದಿ ಪ್ರಾಣ ಕಳೆದುಕೊಂಡ ದುರ್ಘಟನೆ ತೀವ್ರ ಆಘಾತ ಉಂಟುಮಾಡಿದೆ. ಈ ದುರ್ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ.
ರಾಜಧಾನಿಯ ಮಧ್ಯಭಾಗದಲ್ಲೇ ಇಂತಹ ದುರಂತ ಸಂಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರದ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ದುರವಸ್ಥೆಗೆ ಸ್ಪಷ್ಟ ಉದಾಹರಣೆ. ಜನರ ಜೀವ ರಕ್ಷಣೆ ಮಾಡಬೇಕಾದ ಕಾಂಗ್ರೆಸ್ ಸರ್ಕಾರ ಸಿಎಂ ಕುರ್ಚಿ ಕಲಹ ಹಾಗೂ ಹಣ ಲೂಟಿಯಲ್ಲೇ ಮಗ್ನವಾಗಿ ಜನರ ಪ್ರಾಣ ಕಳೆಯುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈಫಲ್ಯಗಳ ಬಗ್ಗೆ, ಅಧಿಕಾರಿಗಳ ಒಳ ಕಚ್ಚಾಟದ ಬಗ್ಗೆ ಈ ಹಿಂದೆ ಸದನದಲ್ಲೇ ನಾನು ಪ್ರಸ್ತಾಪಿಸಿದ್ದರೂ ಅದಕ್ಕೆ ಬೆಲೆ ಕೊಡದ ಸರ್ಕಾರದಿಂದಾಗಿ ಇಂದು ಅಮಾಯಕ ಜೀವಗಳು ಬಲಿಯಾಗಿವೆ.
ಮೃತರ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರ ನೀಡಬೇಕು. ಕೇವಲ ಪರಿಹಾರ ಘೋಷಣೆಗೆ ಸೀಮಿತವಾಗದೆ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು. ಹಳೆ ಕಟ್ಟಡಗಳು ಮತ್ತು ಶಿಥಿಲ ಗೋಡೆಗಳ ತಾಂತ್ರಿಕ ಪರಿಶೀಲನೆ ರಾಜ್ಯದಾದ್ಯಂತ ತುರ್ತಾಗಿ ನಡೆಸಬೇಕು. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಮಳೆ ಅನಾಹುತದಿಂದ ಬೋರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಎಂಟು ಮಂದಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ನನಗೆ ಅತ್ಯಂತ ನೋವು ತಂದಿದೆ. ಆ ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗದವರಿಗೆ ನೋವುನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಮುಂದುವರೆದು, ಸಾರ್ವಜನಿಕರು ದಯವಿಟ್ಟು ಗಾಳಿ, ಮಳೆ, ಗುಡುಗು, ಸಿಡಿಲಿನಂತಹ ಸಂದರ್ಭಗಳಲ್ಲಿ ಎಚ್ಚರದಿಂದ ಇರಬೇಕು. ರಕ್ಷಣೆಗಾಗಿ ಮರಗಳು, ಶೆಡ್, ಕಾಂಪೌಂಡ್ ಸೇರಿದಂತೆ ಹಳೆಯದಾದ ಕಟ್ಟಡಗಳ ಬಳಿ ನಿಲ್ಲಬೇಡಿ. ಪ್ರತಿಯೊಂದು ಜೀವವೂ ಅಮೂಲ್ಯ. ನಿಮ್ಮ ಪ್ರೀತಿ ಪಾತ್ರರೂ ನಿಮಗಾಗಿ ಕಾದಿರುತ್ತಾರೆ ಎಂಬುದನ್ನು ಮರೆಯಬೇಡಿ. ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಶುರುವಾಗಲಿದೆ. ರಾಜ್ಯ ಸರ್ಕಾರವು ಸಹ ಮಳೆ ಅನಾಹುತಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಮೃತರ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ಪರಿಹಾರವನ್ನು ಕೊಡಬೇಕೆಂದು ವಿನಂತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಈ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಯಿಂದ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ದುರ್ಮರಣಕ್ಕೀಡಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದವರ ಮೇಲೆ ಸೂಕ್ತ ನಿರ್ವಹಣೆ ಇಲ್ಲದ ಹಳೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದದ್ದೇ ಈ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿರುವುದು ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಧಾನಿ ಬೆಂಗಳೂರಿನಲ್ಲೇ ಈ ಪಾಡಾದರೆ ಉಳಿದ ಕಡೆ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.
ಈ ಭೀಕರ ದುರ್ಘಟನೆಗೆ ಹೊಣೆ ಹೊತ್ತು ರಾಜ್ಯ ಸರ್ಕಾರ ಗಾಯಗೊಂಡವರಿಗೆ ಚಿಕಿತ್ಸೆ, ಮೃತ ಕುಟುಂಬದವರಿಗೆ ಸಾಂತ್ವನ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಮಳೆಗೆ ಇನ್ನೊಂದು ಅವಘಡ ಸಂಭವಿಸದಂತೆ ಶಿಥಿಲ ನಿರ್ಮಾಣಗಳ ದುರಸ್ತಿ ಸೇರಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಪ್ರಾರ್ಥಿಸುತ್ತಾ, ಪುಟ್ಟ ಮಕ್ಕಳ ಕುಟುಂಬ ಸದಸ್ಯರು ಸೇರಿದಂತೆ ಮೃತಪಟ್ಟವರ ಎಲ್ಲ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆಂದು ತಿಳಿಸಿದ್ದಾರೆ.