ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ಸಂಜೆ ವಿಸ್ತರಣೆಯಾಗುತ್ತಿದ್ದು, 20 ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.
ಪುಟ್ಟರಂಗಶೆಟ್ಟಿ ಅವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದೂಳಿದ ಉಪ್ಪಾರ ಸಮುದಾಯದ ಏಕೈಕ ಶಾಸರಾಗಿದ್ದು, ಉಪ್ಪಾರ ಸಂಘದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದ ಚಾಮಶೆಟ್ಟಿ ಹಾಗೂ ನಂಜಮ್ಮ ದಂಪತಿಯ 10 ಮಕ್ಕಳಲ್ಲಿ ಆರನೇಯವರಾದ ಪುಟ್ಟರಂಗಶೆಟ್ಟಿ ಅವರು ಪದವಿ ಶಿಕ್ಷೆ ಪಡೆದಿದ್ದಾರೆ.
ಪುಟ್ಟರಂಗಶೆಟ್ಟಿ ಅವರು ರಾಜಕೀಯ ಪ್ರವೇಶಿಸುವ ಮುನ್ನ ದಾವಣಗೆರೆ ಜಿಲ್ಲೆಯ ಎಪಿಎಂಸಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಗುಮಾಸ್ತ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ ಪುಟ್ಟರಂಗಶೆಟ್ಟಿ ಅವರು, ಮೊದಲ ಬಾರಿಗೆ ಗೌಡಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು.
ನಂತರ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಚಾಮರಾಜನಗರ ಎಪಿಎಂಸಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
2008ರಲ್ಲಿ ಮೊದಲ ಬಾರಿಗೆ ಶಾಸಕಾರಿಗ ಆಯ್ಕೆಯಾದ ಪುಟ್ಟರಂಗಶೆಟ್ಟಿ ಅವರು 2013, 2018 ಮತ್ತು 2023ರಲ್ಲಿ ಸತತ ನಾಲ್ಕು ಬಾರಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ, 2018ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಮಾಜದ ಮುಖಂಡರಿಂದ ಅಭಿನಂದನೆ
ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಪುಟ್ಟರಂಗಶೆಟ್ಟಿ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಶಾಲಾಕ್ಷಿ ನಟರಾಜ್ ಸೇರಿದಂತೆ ಉಪ್ಪಾರ ಸಮಾಜದ ಹಲವು ಮುಖಂಡರು ಹಾಗೂ ಗಣ್ಯರು ಶುಭಾಶಯ ಕೋರಿದ್ದಾರೆ.