ಬೆಂಗಳೂರು: ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡಿದ್ದ ಉಪಸಭಾಪತಿ ಸ್ಥಾನಕ್ಕಾಗಿ ಸೋಮವಾರ ಉಮಾಶ್ರೀ ಅವರು ನಾಮಪತ್ರ ಸಲ್ಲಿಸಿದ್ದರು.
ಉಪ ಸಭಾಪತಿ ಸ್ಥಾನಕ್ಕಾಗಿ ಆಡಳಿತ ಪಕ್ಷದ ಬಹುಮತ ಇದ್ದಿದ್ದರಿಂದ ಹಾಗೂ ವಿಪಕ್ಷದಿಂದ ಯಾರು ನಾಮಪತ್ರ ಸಲ್ಲಿಸದ ಕಾರಣ ಉಮಾಶ್ರೀ ಅವರನ್ನು ಉಪ ಸಭಾಪತಿಯಾಗಿ ಘೋಷಿಸಲಾಯಿತು.
ನಿನ್ನೆ ವಿಧಾನಮಂಡಲದ ಮೇಲ್ಮನೆಯಲ್ಲಿ ಮಾತನಾಡಿದ ಉಮಾಶ್ರೀ, ಸಮಾಜ ಸೇವೆ ಮಾಡುವ ತುಡಿತದಿಂದಾಗಿ ರಾಜಕೀಯ ಪ್ರವೇಶಿಸಿದೆ. ಬಂಗಾರಪ್ಪ ಅವರಿಂದ ಹಿಡಿದು ಸಿದ್ದರಾಮಯ್ಯನವರವರೆಗೂ ಎಲ್ಲರೂ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರಿಗೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ನಿಮ್ಮೆಲ್ಲರ ಹೊಗಳಿಕೆ ಮಾತುಗಳಿಂದ ನನ್ನ ಮನಸ್ಸು ತುಂಬಿ ಬಂದಿದೆ. ಬದುಕಿನ ಭಾವನಾತ್ಮಕ ಕ್ಷಣ ಇದಾಗಿದೆ. ನನ್ನ ಸಾಧನೆ ಹಿಂದಿನ ಶಕ್ತಿ ನನ್ನ ಹಡೆದವ್ವ ನಿಂಗಮ್ಮ. ನನ್ನ ಹಾಗೇ ಒಂಟಿ ಬದುಕು ಸವೆಸಿದ ಜೀವ ಅದು. ಕೂಲಿ ಕೆಲಸ ಮಾಡಿದ ತಾಯಿಯ ಮಗಳು ನಾನು. ಆ ತಾಯಿಗೆ ನಾನು ಶರಣು. ಸಾಕಿ ಸಲಹಿದ ಬಳಿಕ ದತ್ತು ಪುತ್ರಿಯಾಗಿ ಸ್ವೀಕರಿಸಿದ ಸ್ವಾತಂತ್ರ ಹೋರಾಟಗಾರ ತಂದೆ ದಿ.ಮುನಿನರಸಪ್ಪ, ರೇವಮ್ಮ ದಂಪತಿಗೆ ನಾನು ಅಭಾರಿಯಾಗಿದ್ದೇನೆ ಭಾವುಕವಾಗಿ ನುಡಿದರು.
ನಿಮ್ಮೆಲ್ಲರ ಹೊಗಳಿಕೆ ಮಾತುಗಳಿಂದ ನನ್ನ ಮನಸ್ಸು ತುಂಬಿ ಬಂದಿದೆ. ಬದುಕಿನ ಭಾವನಾತ್ಮಕ ಕ್ಷಣ ಇದಾಗಿದೆ. ನನ್ನ ಸಾಧನೆ ಹಿಂದಿನ ಶಕ್ತಿ ನನ್ನ ಹಡೆದವ್ವ ನಿಂಗಮ್ಮ. ನನ್ನ ಹಾಗೇ ಒಂಟಿ ಬದುಕು ಸವೆಸಿದ ಜೀವ ಅದು. ಕೂಲಿ ಕೆಲಸ ಮಾಡಿದ ತಾಯಿಯ ಮಗಳು ನಾನು. ಆ ತಾಯಿಗೆ ನಾನು ಶರಣು. ಸಾಕಿ ಸಲಹಿದ ಬಳಿಕ ದತ್ತು ಪುತ್ರಿಯಾಗಿ ಸ್ವೀಕರಿಸಿದ ಸ್ವಾತಂತ್ರ ಹೋರಾಟಗಾರ ತಂದೆ ದಿ.ಮುನಿನರಸಪ್ಪ, ರೇವಮ್ಮ ದಂಪತಿಗೆ ನಾನು ಅಭಾರಿಯಾಗಿದ್ದೇನೆ ಭಾವುಕವಾಗಿ ನುಡಿದರು.
ತಮ್ಮ ಮೊದಲ ಚಿತ್ರದ ಬಗ್ಗೆ ನೆನಪಿಸಿಕೊಂಡ ಉಮಾ ಶ್ರೀ: 'ಅನುಭವ' ನನ್ನ ಮೊದಲ ಚಿತ್ರ. ನಿರ್ದೇಶಕ ಕಾಶಿನಾಥ್ ಅವರು ಅವಕಾಶ ಕೊಟ್ಟರು. ನಾನು ಮಾಡಿದ್ದು ಶೃಂಗಾರ ಪಾತ್ರವಾದರೂ ಒಂದೇ ರಾತ್ರಿಯಲ್ಲಿ ನಾನು ತಾರೆಯಾದೆ. ತದನಂತರ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಬಂದವು. 'ಪುಟ್ನಂಜ' ಚಿತ್ರ ಬಳಿಕ ಜೀವನದ ಮತ್ತೊಂದು ಮಜಲಿಗೆ ಹೊರಳಿತು. ಈ ಪಾತ್ರ ಬಂದ ಬಳಿಕ ಮತ್ತೆ ಅವಕಾಶ ಹೆಚ್ಚಾದವು. ಈ ಮಧ್ಯೆ ರಾಜಕಾರಣಕ್ಕೆ ಬಂದು ಸಮಾಜ ಸೇವೆ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಉತ್ತರ ಕರ್ನಾಟಕದ ಮಣ್ಣಿನಲ್ಲಿ ನನ್ನ ರಾಜಕೀಯ ಬದುಕು ಆರಂಭವಾಯಿತು. ಜಗದೀಶ್ ಶೆಟ್ಟರ್ ವಿರುದ್ದ ಚುನಾವಣೆ ರಾಜಕೀಯ ಬದುಕನ್ನು ಬದಲಿಸಿತು. ಅವರು ಸಿಎಂ ಆದರು. ನಾನು ಈಗ ಉಪ ಸಭಾಪತಿ ಆಗ್ತಿದ್ದೇನೆ. ನನ್ನ ಸಾಧನೆ ಹಿಂದೆ ನಿಂತ ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರಿಗೂ ನಾನು ಆಭಾರಿ. ನನ್ನನ್ನು ಇಲ್ಲಿವರೆಗೆ ತಂದ ಪಕ್ಷಕ್ಕೂ ನಾನು ಋಣಿಯಾಗಿದ್ದೇನೆ ಎಂದು ತಿಳಿಸಿದರು.
ಮತ್ತೆ ಮದುವೆ ಆಗಬೇಡ ಅಂತ ಮಗಳು ಹೇಳಿದಳು
ಉಮಾಶ್ರೀಯವರಿಗೆ ಈಗ 68ರ ಹರೆಯ. ಮದುವೆಯಾಗಿ, ಗಂಡ ಬಿಟ್ಟ ನಂತರದಲ್ಲಿ ಕುಡಿತಕ್ಕೂ ದಾಸರಾಗಿದ್ದರು. ಇದೆಲ್ಲವನ್ನು ಮೆಟ್ಟಿ ಮಕ್ಕಳನ್ನು ಬೆಳೆಸಬೇಕಾದಂತಹ ಅನಿವಾರ್ಯತೆ ಇತ್ತು. ಇಂದು ಉಮಾಶ್ರೀ ಏನಾಗಿದ್ದಾರೆ ಎನ್ನೋದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಅವರು ಯಾಕೆ ಎರಡನೇ ಮದುವೆ ಆಗಲಿಲ್ಲ ಎಂಬುದನ್ನು ಈ ಹಿಂದೆ ಹಲವು ಬಾರಿ ಹೇಳಿದ್ದರು. ನಿನ್ನೆ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಬಹಳ ಭಾವುಕರಾಗಿ ಮಾತನಾಡಿದ್ದಾರೆ.
ನನ್ನ ಸ್ನೇಹಿತರೆಲ್ಲರೂ ತುಂಬ ಸಲ ಎಷ್ಟು ದಿನ ಒಂಟಿಯಾಗಿ ಇರ್ತೀಯಾ? ನಿನಗೆ ಸಂಗಾತಿ ಬೇಕು, ಅರವತ್ತನೇ ವರ್ಷಕ್ಕೆ ನೀನು ಒಂಟಿ ಆಗ್ತೀಯಾ ಅಂತ ಬುದ್ಧಿ ಹೇಳಿದ್ದರು. ಅದೇ ಸಮಯಕ್ಕೆ ಟಿ ಎನ್ ಸೀತಾರಾಮ್ ಅವರು ರಮೇಶ್ ಬಂದಗದ್ದೆ ಅವರಿಗೆ ನನ್ನನ್ನು ಮದುವೆ ಮಾಡಿಕೊಡಬೇಕು ಅಂತ ಅಂದುಕೊಂಡಿದ್ದರು. ಆಗ ಮಗಳ ಬಳಿ “ನಾನು ಮದುವೆ ಆಗಲಾ?” ಅಂತ ಪ್ರಶ್ನೆ ಮಾಡಿದಾಗ ಅವಳು “ನನ್ನ ತಾಯಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳೋಕೆ ಇಷ್ಟ ಇಲ್ಲ” ಅಂತ ಅಂದಳು. ಹೀಗಾಗಿ ನಾನು ಬೇರೆ ಮದುವೆ ಆಗಲಿಲ್ಲ ಎಂದು ಹೇಳಿದ್ದಾರೆ.
ಲೋಕೇಶ್ ಹೇಳಿದಂತೆ ಮಿನಿಸ್ಟರ್ ಆದೆ
ನನ್ನ ಗಂಡ ಎರಡನೇ ಮದುವೆಯಾಗಿ ಮಕ್ಕಳಾಗಿದ್ದಾರೆ. ಆ ಬಳಿಕವೂ ನಮ್ಮ ಮನೆಗೆ ಬರುತ್ತಿದ್ದರು. ನಾನು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದೇನೆ. ಆಗ ಲೀಗಲಿ ಡಿವೋರ್ಸ್ ತಗೊಂಡಿರಲಿಲ್ಲ. ಇದರಿಂದ ಸಮಸ್ಯೆ ಆಗುತ್ತದೆ ಅಂತ ಲೋಕೇಶ್ ಅವರು ಹೇಳಿದರು. ಆಗ ನಾನು ಡಿವೋರ್ಸ್ ತಗೊಂಡೆ. ನಟಿಯರು ಹುಟ್ಟೋದೇ ನಮ್ಮ ಸುತ್ತಮುತ್ತಲಿನ ಜಗತ್ತಿಕ್ಕೋಸ್ಕರ. ನಾವು ನಮಗೋಸ್ಕರ ಅಲ್ಲದೇ ಹೋದ್ರೂ, ನಾವು ಕಟ್ಟಿಕೊಂಡು ಬದುಕಿಗೋಸ್ಕರ ಬದುಕಬೇಕಾಗುತ್ತದೆ. ನೀನು ಮಿನಿಸ್ಟರ್ ಕಾರ್ ಮೇಲೆ ಬರುತ್ತೀಯಾ ಅಂತ ಲೋಕೇಶ್ ಅವರು ಹೇಳಿದ್ದರು. ಹಾಲಿನ ಬಾಟಲಿ ಜೊತೆಗೆ ನಾಟಕದ ದಿನಗಳಲ್ಲಿ ನನ್ನ ಮಗುವನ್ನು ಎತ್ಕೊಂಡು ಹೋಗುತ್ತಿದ್ದೆ” ಎಂದು ಉಮಾಶ್ರೀ ಹೇಳಿದ್ದಾರೆ.
ಪುರುಷರ ಕಡೆ ಗಮನಕೊಡಬಾರದು ಅಂತ ರಾಜಕೀಯಕ್ಕೆ ಇಳಿದೆ
ಒಂಟಿ ಜೀವನವನ್ನು ಹೇಗೆ ಜಯಿಸೋದು ಎನ್ನೋದು ಕಲಿತಿದ್ದೆ. ರಾತ್ರಿ ಪೂರ್ತಿ ನಾಟಕ ಮಾಡುತ್ತಿದ್ದೆ. ಬೆಳಗ್ಗೆ ನಿದ್ದೆ ಮಾಡಿ ಮತ್ತೆ ರಾತ್ರಿ ನಾಟಕಕ್ಕೆ ರೆಡಿ ಆಗುತ್ತಿದ್ದೆ. ಹೀಗೆ 2001ರವರೆಗೂ ಕಳೆದೆ. ನನ್ನ ಗಮನಗಳು ಬೇರೆ ಕಡೆಗೆ ಹೋಗತ್ತೆ, ಪುರುಷರ ಕಡೆಗೆ ಗಮನ ಹೋಗತ್ತೆ ಅಂತ 38ನೇ ವಯಸ್ಸಿಗೆ ರಾಜಕೀಯಕ್ಕೆ ಇಳಿದೆ. ಆಗ ನಾನು ರಾಜಕೀಯ ಕ್ಷೇತ್ರದ ಕಡೆಗೆ ಗಮನ ಕೊಟ್ಟು ಎಂಎಲ್‌ಎ ಆದೆ, ಎಂಎಲ್‌ಸಿ ಆದೆ ಎಂದು ಉಮಾಶ್ರೀ ಹೇಳಿಕೊಂಡಿದ್ದಾರೆ.