ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ರಾಜಕೀಯ ಚರ್ಚೆಗಳ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೂಲ ರಾಜಕೀಯ ಅಸ್ತ್ರವಾದ 'ಅಹಿಂದ' ಚಳವಳಿಗೆ ಮರುಜೀವ ನೀಡಲು ಮುಂದಾಗಿದ್ದಾರೆ.
ಆದರೆ, ಈ ಬಾರಿ ಅವರು ಹಳೇ ನಾಯಕರ ಬದಲು ಭವಿಷ್ಯದ ನಾಯಕತ್ವದ ತಂಡವನ್ನು ಕಟ್ಟಲು ನಿರ್ಧರಿಸಿದ್ದು, ಈ ಹೊಸ ತಂಡದಲ್ಲಿ ಅವರ ಪುತ್ರ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೂ ಪ್ರಮುಖ ಸ್ಥಾನ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಒಬಿಸಿ ಸಮಾವೇಶ ಅಹಿಂದ ಚಳವಳಿಗೆ ಮತ್ತೆ ಚಾಲನೆ ನೀಡುವ ವೇದಿಕೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಹಿಂದಿನ ಆಪ್ತ ಬೆಂಬಲಿಗರಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹ್ಮದ್ ಖಾನ್ ಅವರನ್ನು ದೂರ ಇಡುವ ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಆದರೆ, ಈ ಸಮಾವೇಶಕ್ಕೆ ‘ಅಹಿಂದ’ ಹೆಸರನ್ನು ಬಳಸಲಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಮೂಲ ಸಮುದಾಯವಾದ ಕುರುಬ ಸಮುದಾಯದ ಮುಖಂಡರು ಸೇರಿದಂತೆ ಒಬಿಸಿ ನಾಯಕತ್ವದ ನೇತೃತ್ವದಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷವೇ ಅಹಿಂದದೊಂದಿಗೆ ಸಮಾನಾರ್ಥಕವಾಗಿದೆ. ನಿರ್ದಿಷ್ಟ ಸಮಾವೇಶದಲ್ಲಿ ಭಾಗವಹಿಸದಿರುವುದನ್ನು ಬಣ ರಾಜಕೀಯ ಅಥವಾ ಭಿನ್ನಾಭಿಪ್ರಾಯದ ವಿಚಾರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿಯವರನ್ನು ಸಿದ್ದರಾಮಯ್ಯ ಬೆಂಬಲಿಸಲಿಲ್ಲ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಅಂತಿಮವಾಗಿ ಆ ಸ್ಥಾನ ಈಡಿಗ ಸಮುದಾಯದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಆ ಸ್ಥಾನ ದೊರೆತಿದೆ. .
ಈ ನಡುವೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಚಿವರನ್ನಾಗಿ ಮಾಡಿರುವುದು ಹಾಗೂ ವಿಧಾನ ಪರಿಷತ್‌ನಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಿರುವುದು ಸಿದ್ದರಾಮಯ್ಯ ಅವರ ಹಳೆಯ ಅಹಿಂದ ಪಾಳಯದಲ್ಲಿ ಶೀತಲ ಸಮರಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ಅವರಂತೆಯೇ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದ ಕೆಲವು ನಾಯಕರ ನಡುವೆಯೂ ಈ ಬೆಳವಣಿಗೆ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಾಜಕೀಯ ವಿಶ್ಲೇಷಕರೊಬ್ಬರ ಮಾತನಾಡಿ, ಕೇರಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಬಳಸಿಕೊಂಡ ಜಮೀರ್ ಅಹ್ಮದ್ ಖಾನ್, ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದ ವೇಳೆ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹಾಗೂ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್‌ಗೆ ಪ್ರಮುಖ ಸ್ಥಾನ ನೀಡುವ ಲೆಕ್ಕಾಚಾರ?
ಸೆಪ್ಟೆಂಬರ್ 6ರ ಒಬಿಸಿ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನೂ ಸಿದ್ದರಾಮಯ್ಯ ಆಹ್ವಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಪ್ರಮುಖ ದಲಿತ ಮುಖವಾಗಿರುವ ಪರಮೇಶ್ವರ್ ಅವರನ್ನು ಸಮಾವೇಶದಲ್ಲಿ ಮುಂಚೂಣಿಗೆ ತರುವ ಮೂಲಕ ಪುನರ್‌ರೂಪಿತ ಅಹಿಂದ ಅಭಿಯಾನಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶವಿದೆ ಎನ್ನಲಾಗಿದೆ.
ಹಳೆಯ ನಾಯಕರೊಂದಿಗೆ ಸಂಬಂಧ ಸುಧಾರಿಸಲು ಯತೀಂದ್ರ ಪ್ರಯತ್ನ
ಈ ನಡುವೆ ತಂದೆ ಸಿದ್ದರಾಮಯ್ಯ ಅವರ ಹಳೆಯ ಬೆಂಬಲಿಗರೊಂದಿಗಿನ ಸಂಬಂಧವನ್ನು ಸುಧಾರಿಸಲು ಯತೀಂದ್ರ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಮಹದೇವಪ್ಪ, ಕೆ. ವೆಂಕಟೇಶ್ ಹಾಗೂ ತನ್ವೀರ್ ಸೇಠ್ ಸಭೆ ನಡೆಸುತ್ತಿದ್ದ ವೇಳೆ ಯತೀಂದ್ರ ಮಧ್ಯಪ್ರವೇಶಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಅವರು ಸತೀಶ್ ಜಾರಕಿಹೊಳಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಯತೀಂದ್ರ ಅವರು ಸತೀಶ್ ಜಾರಕಿಹೊಳಿ ತಮ್ಮ ತಂದೆಯ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಹೇಳಿದ್ದರು.
ಈಗ ಸಿದ್ದರಾಮಯ್ಯ ಅವರೊಂದಿಗೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳಲು ಬಯಸುತ್ತಿರುವ ನಾಯಕರನ್ನು ಒಟ್ಟುಗೂಡಿಸಿಕೊಂಡು ತಂದೆಯ ಅಹಿಂದ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಯತೀಂದ್ರ ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಮತದಾರ ಸಮುದಾಯವಾಗಿರುವ ಕುರುಬ ಸಮುದಾಯದ ಮೇಲೆ ಸಿದ್ದರಾಮಯ್ಯ ಅವರಿಗೆ ಇರುವ ಪ್ರಭಾವ ಈ ಹೊಸ ರಾಜಕೀಯ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.