ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 187 ಕೋಟಿ ಹಣವನ್ನು ಲೂಟಿ ಮಾಡಿದ ಬಿ.ನಾಗೇಂದ್ರ ಅವರನ್ನು ರಕ್ಷಿಸಲು ವಿಧಾನಮಂಡಲ ಅಧಿವೇಶನವನ್ನೇ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ, ಕೊನೆಗೂ ನಮ್ಮ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬಿಜೆಪಿಯಿಂದ ಪಾದಯಾತ್ರೆ ಘೋಷಣೆ ಮಾಡಿದ ಕೂಡಲೇ ಬೆವರಿ ಬೆದರಿದ ಕಾಂಗ್ರೆಸ್ ಕೂಡಲೇ ರಾಜೀನಾಮೆ ಪಡೆದು ಅಲ್ಪ ಸ್ವಲ್ಪ ಮಾನ ಉಳಿಸಿಕೊಂಡಿದೆ. ಮಾತು ಮಾತಿಗೂ ಬಾಬಾ ಸಾಹೇಬ್ ಅಂಬೇಡ್ಕರರ ಹೆಸರು ಹೇಳಿಕೊಂಡು ದಲಿತರನ್ನು ತುಳಿದ ಕಾಂಗ್ರೆಸ್‌ಗೆ ದಲಿತರ ಆಕ್ರೋಶದ ಬಿಸಿ ತಟ್ಟಿದೆ. ಕರ್ನಾಟಕದ ರಾಜಕೀಯದಲ್ಲಿ ಭ್ರಷ್ಟರನ್ನು ಸಚಿವರಾಗಿಟ್ಟುಕೊಂಡು ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದಿದ್ದಾರೆ.
ಇದು ಕೇವಲ ರಾಜೀನಾಮೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ಅಹಂಕಾರದ ಮೇಲೆ ಬಿದ್ದ ಬಲವಾದ ಹೊಡೆತ! ಇದು ಕೋಟ್ಯಂತರ ದಲಿತರಿಗೆ ಸಿಕ್ಕಿರುವ ದಿಗ್ವಿಜಯ. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಲೂಟಿ ಮಾಡಿದ ಆರೋಪದ ವಿರುದ್ಧ ಬಿಜೆಪಿ-ಜೆಡಿಎಸ್ ಸದನದ ಒಳಗೆ ಹಾಗೂ ಹೊರಗೆ ನಿರಂತರವಾಗಿ ಹೋರಾಟ ಮಾಡಿತ್ತು. ನಮ್ಮ ನಿರಂತರ ಹೋರಾಟ, ಜನಾಕ್ರೋಶ ಮತ್ತು ನಮ್ಮ ಪಾದಯಾತ್ರೆಯ ಘೋಷಣೆಯ ಬೆನ್ನಲ್ಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದು ಭ್ರಷ್ಟರ ವಿರುದ್ಧ ನಮ್ಮ ಹೋರಾಟದ ಗೆಲುವು. ಇದು ದಲಿತರ ಹಣಕ್ಕೆ ನ್ಯಾಯ ಬೇಕೆಂಬ ಆಗ್ರಹಕ್ಕೆ ಸಿಕ್ಕ ಜಯ ಎಂದಿದ್ದಾರೆ.
ಆದರೆ, ಒಬ್ಬ ಸಚಿವನ ರಾಜೀನಾಮೆ ಕೊಡಿಸಿದರೆ ದಲಿತರಿಗೆ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ನಾಗೇಂದ್ರ ರಾಜೀನಾಮೆ ಕೊಟ್ಟ ಮಾತ್ರಕ್ಕೆ ಕಾಂಗ್ರೆಸ್ ಪಾಪದ ಕೊಡ ಖಾಲಿಯಾಗುವುದಿಲ್ಲ. ಪ್ರತಿಯೊಂದು ಪ್ರಶ್ನೆಗೂ ಉತ್ತರ ಬೇಕು. ದಲಿತರ ಹಣಕ್ಕೆ ಕೈ ಹಾಕಿದ ಪ್ರತಿಯೊಬ್ಬರೂ, ಹಗರಣಕ್ಕೆ ಸಹಕರಿಸಿದ ಪ್ರತಿಯೊಬ್ಬರೂ, ಆರೋಪಿಗಳನ್ನು ರಕ್ಷಿಸಿದ ಪ್ರತಿಯೊಬ್ಬರೂ ಕಾನೂನಿನ ಮುಂದೆ ನಿಲ್ಲಲೇಬೇಕು. ನಾಗೇಂದ್ರ ಅವರ ರಾಜೀನಾಮೆ ಅಂತ್ಯವಲ್ಲ, ಇದು ಸತ್ಯ ತನಿಖೆಯ ಆರಂಭ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ. ಈಗ ಸತ್ಯ ಹೊರಬರಬೇಕು, ಲೂಟಿಯ ಸಂಪೂರ್ಣ ಲೆಕ್ಕ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಧಿಕಾರಿ ಪಿ.ಚಂದ್ರಶೇಖರನ್ ಆತ್ಮಕ್ಕೆ ಶಾಂತಿ ದೊರೆಯಬೇಕು. ಜನರ ಹಣಕ್ಕೆ ನ್ಯಾಯ ಸಿಗುವವರೆಗೂ, ಹಗರಣದ ಸಂಪೂರ್ಣ ಸತ್ಯ ಬಯಲಾಗುವವರೆಗೂ, ತಪ್ಪಿತಸ್ಥರು ಕಾನೂನಿನ ಮುಂದೆ ನಿಲ್ಲುವವರೆಗೂ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಇದು ಕೇವಲ ರಾಜೀನಾಮೆಯ ಗೆಲುವಲ್ಲ. ಇದು ಸತ್ಯದ ಗೆಲುವಿನ ಆರಂಭ ಎಂದು ಆರ್. ಅಶೋಕ್ ಹೇಳಿದ್ದಾರೆ.