ಬೆಂಗಳೂರು: ವಿಬಿಜಿ ರಾಮ್ ಜಿ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಬಗ್ಗೆ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದ್ದು, ರಾಜ್ಯದ ಕೂಲಿ ಕಾರ್ಮಿಕರ ದಾರಿತಪ್ಪಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್‌ನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNAREGA) ಹೆಸರನ್ನು ಬದಲಾಯಿಸಿ, ವಿಬಿಜಿ ರಾಮ್ ಜಿ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಎಂದು ಹೆಸರಿಸಿದೆ. ಅದಕ್ಕೆ ಕೇಂದ್ರ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ನರೇಗಾ (MG NREGA) ಯೋಜನೆಯನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಎಂದು ಪರಿವರ್ತನೆಗೊಳಿಸಲಾಗಿದ್ದು, ಇದರಲ್ಲಿಯೂ ಪ್ರತಿಪಕ್ಷದವರು ರಾಜಕೀಯ ಮಾಡುತ್ತಿರುವುದು ಅವರ ಮೌಢ್ಯವನ್ನು ತೋರಿಸುತ್ತದೆ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗುವುದನ್ನು ಸಹಿಸದ ಪ್ರತಿಪಕ್ಷಗಳು ಈ ಯೋಜನೆಯ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ನರೇಗಾ ಯೋಜನೆಯಲ್ಲಿ ಪ್ರತಿವರ್ಷ ನೂರು ದಿನಗಳ ಉದ್ಯೋಗ ಖಾತರಿಯಿತ್ತು. ಈಗ 125 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗವಕಾಶದ ಭರವಸೆಯೊಂದಿಗೆ ಆದಾಯದ ಭದ್ರತೆಯು ಹೆಚ್ಚಾಗಲಿದೆ. ಮುಂದೆಯೂ ಆಯಾ ಗ್ರಾಮ ಪಂಚಾಯತಗಳೇ ಯೋಜನೆಯ ಕೇಂದ್ರವಾಗಿರಲಿದೆ. ಆದರೆ, ಇದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾಂಗ್ರೆಸ್ ಮೂಡಿಸುತ್ತಿದೆ ಎಂದ ಸಚಿವರು, ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲ ಮಾಡಿಕೊಡಲು ವರ್ಷದಲ್ಲಿ 60 ದಿನಗಳ ಬಿಡುವು ನೀಡಲಾಗಿದೆ. ಇಂತಹ ರೈತ ಸ್ನೇಹಿ ನಿಯಮಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಹಿಂದೆ ಕೂಲಿಕಾರರ ಹೆಸರು ಹೇಳಿ ನರೇಗಾ ಯೋಜನೆ ದುರ್ಬಳಕೆ ಮಾಡಲಾಗುತ್ತಿತ್ತು. ಅದಕ್ಕಾಗಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಕೆ ಕಡ್ಡಾಯ ಮಾಡಲಾಗಿದೆ. ರಾಜ್ಯ ಸರ್ಕಾರಗಳು ಅನಗತ್ಯ ವೆಚ್ಚ ಕಡಿಮೆ ಮಾಡಲು ಭ್ರಷ್ಟಾಚಾರಕ್ಕೆ ಕಡಿವಾಣ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಕಾಲಾನುಕಾಲಕ್ಕೆ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮ ತರುವ ನಿಟ್ಟಿನಲ್ಲಿ ಕೆಲ ಯೋಜನೆಗಳಲ್ಲಿ ಅಗತ್ಯ ಪರಿಷ್ಕರಣೆ ತರುವುದು ಅವಶ್ಯವಾಗಿರುತ್ತದೆ. ಈ ಬದಲಾವಣೆಯ ಮುಖ್ಯ ಉದ್ದೇಶ ಜನರ ಜೀವನೋಪಾಯವನ್ನು ಬಲಪಡಿಸುವ ಕಲ್ಯಾಣ (Welfare) ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇವೆರಡನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ. ಇವೆರೆಡೂ ಒಂದಕ್ಕೊಂದು ಪೂರಕ ಮತ್ತು ಅನಿವಾರ್ಯ ಎಂದರು.
MGNAREGA ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಆದರೆ, ಇದು Off the record (Target based scheme) ಆಗಿ ಪರಿವರ್ತಿತವಾಗಿತ್ತು. ಅಲ್ಲದೆ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಇದ್ದ ಅತಿ ದೊಡ್ಡ ಸಮಸ್ಯೆ ಎಂದರೆ ಸೂಕ್ತ ಸಮಯದಲ್ಲಿ ಕೂಲಿ ಮತ್ತು ಸಾಮಗ್ರಿ ವೆಚ್ಚದ ಪಾವತಿ ಮಾಡದೇ ಇರುವುದಾಗಿತ್ತು. ಇದರಿಂದ ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾಗಿ ವೇತನ ಸಿಗದೇ, ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದನ್ನರಿತು ಈ ಸಮಸ್ಯೆ ಪರಿಹಾರಾರ್ಥವಾಗಿ ಹೊಸ ಪರಿಷ್ಕೃತ ಯೋಜನೆಯಡಿ Centralized payment system ಇರುವುದರಿಂದ ಈ ಮೊದಲು ಇದ್ದ ಎಲ್ಲಾ ಗೊಂದಲಗಳಿಗೆ ಫುಲ್ ಸ್ಟಾಪ್ ಬೀಳಲಿದೆ ಎಂದು ಮಾಹಿತಿ ನೀಡಿದರು.