ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದ್ದು, ಒಂದು ಕಡೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮಾತೇ ಅಂತಿಮ ಎನ್ನುತ್ತಿದ್ದಾರೆ.
ಸಿಎಂ ಕುರ್ಚಿ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಗಳವಾರ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನ ಅವರನ್ನು ಜಂಟಿಯಾಗಿ ಸ್ವಾಗತಿಸಿದರು.
ತಮಿಳುನಾಡಿಗೆ ತೆರಳಲು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿ, ಮೈಸೂರು ಅರಮನೆ ಮಾದರಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಸಿಎಂ ಹಾಗೂ ಡಿಸಿಎಂ ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮಲ್ಲಿ ಯಾವ ಗೊಂದಲ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಊಹಾಪೋಹ ಬಗ್ಗೆ ಚರ್ಚೆ ಮಾಡ್ತಿರುವುದು ಮಾಧ್ಯಮದವರು ಎಂದರು.
ಯಾರೋ ಎಂಎಲ್ಎ ಏನೂ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು? ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ.ಶಿವಕುಮಾರ್. ಡಿಸಿಎಂ ಡಿ.ಕೆ.ಶಿವಕುಮಾರ್ ಏನಾದರೂ ಮಾತನಾಡಿದ್ದಾರಾ? ನಾನೇನಾದರೂ ಮಾತನಾಡಿದ್ದೀನಾ? ಮಾಹಿತಿ ಇಲ್ಲದ MLA ಹೇಳಿದ್ದಕ್ಕೆ ಪ್ರತಿಕ್ರಿಯೆ ಕೇಳಿದರೆ ಹೇಗೆ? ನಮ್ಮಲ್ಲಿ ಯಾವ ಗೊಂದಲ ಇಲ್ಲ. ಯಾವ ಚರ್ಚೆಯೂ ಇಲ್ಲ. ಖರ್ಗೆ, ಡಿ.ಕೆ.ಶಿವಕುಮಾರ್ ಜೊತೆ ನಾನು ಮಾತನಾಡಿದ್ದೇನೆ. ಯಾರ ಅಪಸ್ವರವೂ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಏನೇ ತೀರ್ಮಾನಗಳಿದ್ದರೂ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವೆಂದು ನಾನು, ಡಿಕೆ ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.