ಚಾಮರಾಜನಗರ: ಸರ್ಕಾರದ ಖಜಾನೆ ಖಾಲಿಯಾಗಿದೆ, ಸ್ಥಿರತೆ ಹೋಗಿದೆ. ಸಿದ್ದರಾಮಯ್ಯ ಡಮ್ಮಿ ಸಿಎಂ ಆಗಿದ್ದಾರೆಂದು ಕೇಂದ್ರ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಏನ್ ಬೇಕಾದರೂ ಮಾಡುತ್ತಾರೆ. ದೇಶ ಇದ್ರೆ ನಾವು ದೇಶಕ್ಕಿಂತ ಯಾರೂ ದೊಡ್ಡವರಿಲ್ಲ ಈ ಬಗ್ಗೆ ಹಿಂದೆ ಸಲಹೆ ಸೂಚನೆ ಕೊಟ್ಟಿದ್ದೇನೆ. ನಾನು ಹೇಳಿದ್ದು ತಲೆಗೆ ಹೋಗುತ್ತಿಲ್ಲ ಮಕ್ಕಳ ಆಟ ಅಂತ ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಮಾಡಿದ ಪಾಪಗಳು ಎಲ್ಲರಿಗೂ ತಿಳಿದಿವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಮುಗ್ಧ ಜನರನ್ನು ಬಲಿಪಶುಗಳನ್ನಾಗಿ ಮಾಡಬಾರದು. ಬಳ್ಳಾರಿ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಖ್ಯಮಂತ್ರಿ ಖಳನಾಯಕನಾಗುತ್ತಾರೆ ಎಂದು ಸೋಮಣ್ಣ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುನಿಯಪ್ಪ ಹೇಳುತ್ತಿದ್ದಾರೆ. ಮುನಿಯಪ್ಪ ಪ್ರಾಮಾಣಿಕವಾಗಿ ಮಾತನಾಡಲು ಕಲಿಯಬೇಕು ಎಂದು ಹೇಳಿದರು. ಆದಾಗ್ಯೂ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ಆಗುತ್ತದೆಯೇ ಎಂದು ವರದಿಗಾರರು ಅವರನ್ನು ಕೇಳಿದಾಗ ಪ್ರಶ್ನೆಗೆ ಉತ್ತರಿಸದೆ ತೆರಳಿದರು.