ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಜೂನ್ ಒಳಗೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಬೆನ್ನಲ್ಲೇ ಇದೀಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರಶ್ನೆ ಎದ್ದಿದ್ದು, ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, 2015 ರಿಂದ ಬಿಬಿಎಂಪಿ ಚುನಾವಣೆ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಚುನಾವಣೆ ಮಾಡಬೇಕು. ಈ ಸರ್ಕಾರಕ್ಕೆ ಚುನಾವಣೆ ಮಾಡೋಕೆ ಭಯ. 2.5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.
ಜನ ಕಾಂಗ್ರೆಸ್ ಅವರನ್ನ ತಿರಸ್ಕಾರ ಮಾಡ್ತಾರೆ ಅನ್ನೋ ಭಯದಲ್ಲಿ ಚುನಾವಣೆ ಮಾಡೋಕೆ ಹಿಂದೇಟು ಹಾಕಿದ್ರು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿರೋದ್ರಿಂದ ಚುನಾವಣೆ ಆಗ್ತಿದೆ. ಜಿಬಿಎ ಚುನಾವಣೆ ಏಕಾಂಗಿಯಾಗಿ ಎದುರಿಸೋಣ ಅಂತ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಿದೆ.
ಈಗಾಗಲೇ ಜಿಬಿಎ ಚುನಾವಣೆಗೆ ಜೆಡಿಎಸ್ ಪಕ್ಷದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಹೆಚ್.ಡಿ ದೇವೇಗೌಡ ನೇತೃತ್ವದಲ್ಲಿ ಭರ್ಜರಿ ಸಭೆ ನಡೆಯುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮೈತ್ರಿ ನಡೆಯುತ್ತದೆಯೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಈ ಮಧ್ಯೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಲೋಕಲ್ ಬಾಡಿ ಎಲೆಕ್ಷನ್‌ಗಳಲ್ಲಿ ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ಹೋಗಬೇಕಾ ಎಂಬ ನಿರ್ಣಯ ದೆಹಲಿಯಲ್ಲಿ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ನಮ್ಮ ಪಕ್ಷದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ನಿರ್ಧಾರ ಮಾಡುತ್ತಾರೆ. ಇದರ ಸಾಧಕ-ಬಾಧಕಗಳನ್ನು ದೆಹಲಿಯಲ್ಲಿ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.
ಇದು ಕಾರ್ಯಕರ್ತರ ಚುನಾವಣೆ. ಆಕಾಂಕ್ಷಿಗಳು ಜಾಸ್ತಿ ಇದ್ದಾರೆ. ನಾಯಕತ್ವ ಹುಟ್ಟಿಹಾಕುವ ಚುನಾವಣೆ. ಇದು ಸುವರ್ಣ ಅವಕಾಶ ಎಂಬುದು ಎಲ್ಲರ ಅಭಿಪ್ರಾಯ. ಇದನ್ನು ದೇವೇಗೌಡರು ಬಳಿ ಹಂಚಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಅಂತ ದೇವೇಗೌಡರು, ಮೋದಿ, ಅಮಿತ್ ಶಾ ತೀರ್ಮಾನ ಮಾಡ್ತಾರೆ. ಹೆಚ್‌ಡಿಕೆ ರಾಜ್ಯ ರಾಜಕಾರಣಕ್ಕೆ ಬರಬೇಕು ಅನ್ನೋದು ಜನರ ಭಾವನೆ ಆಗಿದೆ. ನಾನು ರಾಜ್ಯ ಪ್ರವಾಸ ಮಾಡಿದ ಸಮಯದಲ್ಲಿ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ. ಕುಮಾರಸ್ವಾಮಿ ಅವರ ಎರಡು ಬಾರಿಯ ಆಡಳಿತವನ್ನು ಜನ ನೆನಪು ಮಾಡಿಕೊಳ್ತಿದ್ದಾರೆ. ಜನರ ಅಭಿಪ್ರಾಯ ಮತ್ತು ಬಿಜೆಪಿ ನಾಯಕರ ಅಭಿಪ್ರಾಯವೂ ಕುಮಾರಸ್ವಾಮಿ ರಾಜ್ಯಕ್ಕೆ ಬರಬೇಕು ಅಂತ ಇದೆ ಎಂದರು..