ಬೆಳಗಾವಿ: ವಿದೇಶ ಪ್ರವಾಸದಿಂದ ಹಿಂದಿರುಗಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ನಿನ್ನೆ ಶನಿವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಅವರೊಂದಿಗೆ ರಹಸ್ಯವಾಗಿ ಚರ್ಚೆ ನಡೆಸಿದ್ದು, ಕಾಂಗ್ರೆಸ್‌ನಲ್ಲಿ ತೀವ್ರ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.
ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಅಕ್ಕಪಕ್ಕದಲ್ಲಿ ಅಧಿಕೃತ ನಿವಾಸಗಳನ್ನು ಹೊಂದಿರುವ ಈ ಇಬ್ಬರು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.
ದಕ್ಷಿಣ ಆಫ್ರಿಕಾಕ್ಕೆ ಒಂದು ವಾರದ ಪ್ರವಾಸಕ್ಕೆ ಹೋಗಿದ್ದ ಸತೀಶ್ ಜಾರಕಿಹೊಳಿ ಮೊನ್ನೆ ಶುಕ್ರವಾರ ಬೆಂಗಳೂರಿಗೆ ಮರಳಿದರು. ನಿನ್ನೆ ಶನಿವಾರ ಬೆಳಗ್ಗೆ ಮಹದೇವಪ್ಪ ಅವರು ಸತೀಶ್ ಜಾರಕಿಹೊಳಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಯ್ ಬರೇಲಿ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿರುವ ಈ ಸಂದರ್ಭದಲ್ಲಿಈ ಇಬ್ಬರು ಸಚಿವರು ರಹಸ್ಯ ಮಾತುಕತೆ ನಡೆಸಿದ್ದು, ರಾಜಕೀಯ ಮಹತ್ವ ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ನಡೆದ ಸತೀಶ್ ಜಾರಕಿಹೊಳಿ- ಹೆಚ್ ಸಿ ಮಹದೇವಪ್ಪ ಭೇಟಿಯು ರಾಜಕೀಯ ವಲಯಗಳಲ್ಲಿ ಗಮನ ಸೆಳೆದಿದೆ. ಇಬ್ಬರೂ ಸಚಿವರು ಸಿದ್ದರಾಮಯ್ಯ ಅವರು ಐದು ವರ್ಷಗಳ ಅವಧಿಯನ್ನು ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಬೇಕು ಎಂದು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯನ್ನು ಅವರು ದೃಢವಾಗಿ ವಿರೋಧಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಡಿಕೆ ಶಿವಕುಮಾರ್ ದೆಹಲಿ ಮಟ್ಟದಲ್ಲಿ ತಮ್ಮ ಲಾಬಿಯನ್ನು ಮುಂದುವರೆಸಿದ್ದಾರೆ. ತಮ್ಮ ನಿಲುವಿನಿಂದ ಹಿಂದೆ ಸರಿಯಲು ಡಿ ಕೆ ಶಿವಕುಮಾರ್ ನಿರಾಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಣಾಯಕ ಹಂತದಲ್ಲಿ, ಇಬ್ಬರು ಹಿರಿಯ ಸಚಿವರ ನಡುವಿನ ಮಾತುಕತೆಯು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇದು ಕಾಂಗ್ರೆಸ್‌ನೊಳಗೆ ಕುದಿಯುತ್ತಿರುವ ಅಧಿಕಾರ ಬದಲಾವಣೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.