ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂಪಾಯಿ ಹಗರಣ ನಡೆದಿದ್ದು, ಈ ಅಕ್ರಮ ಹಣವನ್ನು ಅಸ್ಸಾಂ ರಾಜ್ಯ ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪಮಾಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರವು ಇಲಾಖೆಗಳಿಗೆ ಆದಾಯ ಸಂಗ್ರಹ ಗುರಿಗಳನ್ನು ನಿಗದಿಪಡಿಸುತ್ತದೆ. ಆದರೆ, ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಹಾಕಲಾಗುತ್ತಿದೆ. ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಅವರು 25 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಇದರಿಂದ ಇಲಾಖೆಯಲ್ಲಿನ ಭ್ರಷ್ಟಾಚಾರ ಬಹಿರಂಗವಾಗಿದೆ. ಅಲ್ಲದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ರೂ.5,000 ಕೋಟಿ ಹಗರಣ, ವಾಲ್ಮೀಕಿ ನಿಗಮದ ನಿಧಿಗಳ ದುರ್ಬಳಕೆ ಹಾಗೂ ರೂ.600 ಕೋಟಿ ಮೌಲ್ಯದ ಭೂ ವ್ಯವಹಾರಗಳಲ್ಲೂ ಅಕ್ರಮಗಳು ನಡೆದಿವೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಯಾಗಿದ್ದಾರೆ. ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ, ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ ಜಿ ರಾಮ್ ಜಿ) ಯೋಜನೆ ವಿರೋಧಿಸಲು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಇಡೀ ರಾಜ್ಯವನ್ನು ವ್ಯಸನದಲ್ಲಿ ಮುಳುಗಿಸುವುದರ ಜತೆಗೆ ಗಾಂಧಿಯವರ ಆದರ್ಶಗಳನ್ನು ಹಾಳು ಮಾಡುತ್ತಿದೆ. ಈ ಸರ್ಕಾರ ಗಾಂಧೀಜಿಯ ಆದರ್ಶಗಳನ್ನು ನಾಶಮಾಡಿದೆ. ಆಡಳಿತಕ್ಕಿಂತ ರಾಜಕೀಯಕ್ಕೆ ಕಾಂಗ್ರೆಸ್ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
CL-7 ಪರವಾನಗಿಗೆ 1.25 ಕೋಟಿ ರೂ. ಲಂಚ ಕೇಳಲಾಗಿದೆ ಮತ್ತು CL-2 ಪರವಾನಗಿಗೆ 1.5 ಕೋಟಿ ರೂ. ಲಂಚ ನಿಗದಿಪಡಿಸಲಾಗಿದೆ. CL-9 ಪರವಾನಗಿಗಳಿಗೆ ಒಟ್ಟು 92 ಕೋಟಿ ರೂ. ಮತ್ತು ಮೈಕ್ರೋಬ್ರೂವರಿ ಪರವಾನಗಿಗೆ 2.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಮಾದಕ ಮಾಫಿಯಾ ಕುರಿತಂತೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು. ರಾಜ್ಯದಲ್ಲಿ ಸುಮಾರು 180 ಜನರು ಡ್ರಗ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ, ವರ್ಗಾವಣೆ ಹಾಗೂ ನೇಮಕಾತಿಗೆ ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.