ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಹುದ್ದೆ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಮಾತ್ರ ಗೊತ್ತು. ಇದನ್ನೆಲ್ಲಾ ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆ? ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು. ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.