ಬಾದಾಮಿ : ಚಾಮುಂಡೇಶ್ವರಿ ಕ್ಷೇತ್ರದವರು ನನ್ನನ್ನು ಸೋಲಿಸಿದ್ದರು. ಆದರೆ, ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದ್ದರು. ಅದರಿಂದಲೇ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಉದ್ಘಾಟಿಸಿದ ಅವರು, ನಿಮ್ಮ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಚಾಲುಕ್ಯ ಉತ್ಸವ ನಡೆಯಲಿಲ್ಲ, ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಯಾಗಲಿಲ್ಲ ಎಂಬ ಕೊರಗಿತ್ತು. ಈಗ ಅವೆರಡೂ ಈಡೇರಿವೆ ಎಂದರು.
ಎರಡೂವರೆ ವರ್ಷಗಳಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ₹2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ವೇದಿಕೆ ಮೇಲೆ ಪ್ರತಿಪಕ್ಷದ ನಾಯಕರೂ ಇದ್ದಾರೆ. ಆದರೆ, ಇಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಕೊಡುವೆ. ನೀವೂ ಕೇಂದ್ರದಿಂದ ಅನುದಾನ ತರಲು ಕೈಜೋಡಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು. ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಬಾದಾಮಿಯಲ್ಲಿ ಗೆಲ್ಲಿಸಿದರು. ಇದು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಎರಡ್ಮೂರು ಬಾರಿ ಮಾತ್ರ ಇಲ್ಲಿಗೆ ಬಂದು ಗೆಲ್ಲಿಸಲು ಮನವಿ ಮಾಡಿದ್ದೆ. ಆದರೆ ನೀವೆಲ್ಲ ನನ್ನನ್ನು ಗೆಲ್ಲಿಸಿದ್ದರ ಪರಿಣಾಮವೇ ನಾನು 2023ರಲ್ಲಿ ಪುನಃ ವರುಣಾದಲ್ಲಿ ಗೆದ್ದು ಸಿಎಂ ಆಗಲು ಕಾರಣವಾಯಿತು. ಇದನ್ನು ನಾನು ಜೀವನಪೂರ್ತಿ ಮರೆಯಲ್ಲ ಎಂದರು. ನಾನು ಶಾಸಕನಾಗಿದ್ದಾಗ ಉತ್ಸವ ಮಾಡಲು ಆಗಲಿಲ್ಲ. ಆದರೀಗ ಸಿಎಂ ಆಗಿದ್ದೇನೆ. ಈಗಲಾದರೂ ಮಾಡೋಣ ಎಂದು ಬಜೆಟ್‌ನಲ್ಲೇ ಘೋಷಣೆ ಮಾಡಿದೆ. ಈ ಉತ್ಸವಕ್ಕೆ ಒಟ್ಟು 3 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಇನ್ನೂ 1 ಕೋಟಿ ಅನುದಾನ ಕೊಡುವೆ ಭರವಸೆ ನೀಡಿದರು.