ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಷಯ ತಣ್ಣಗಾಗಿಲ್ಲ, ಸಂಕ್ರಾಂತಿ ಕಳೆದರೂ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ದಾವೋಸ್ ಗೆ ಪ್ರಯಾಣಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದರು.
ಇವೆಲ್ಲದರ ಮಧ್ಯೆ ಇಂದು ಡಿ ಕೆ ಶಿವಕುಮಾರ್ ಅವರ ಸೋದರ ಮಾಜಿ ಸಂಸದ ಡಿ ಕೆ ಸುರೇಶ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಕುರಿತು ತುಂಬಾ ಮಾರ್ಮಿಕವಾಗಿ ಮಾತನಾಡಿದ್ದಾರೆ. ಅವರ ಹಲವು ಹೇಳಿಕೆಗಳು ನಾಯಕತ್ವ ಬದಲಾವಣೆಗೆ ಸಂಬಂಧಪಟ್ಟಂತೆ ಇರುವ ಗೊಂದಲಗಳಿಗೆ ಹೊಂದಿಕೆಯಾಗುವಂತೆ ಇದೆ.
ಪಕ್ಷದ ವರಿಷ್ಠ, ಲೋಕಸಭೆ ನಾಯಕ ರಾಹುಲ್ ಗಾಂಧಿ ಅವರು ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ, ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದಾಗಲೂ ಕೂಡ ಅದೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸೂಕ್ತ ಸಂದರ್ಭದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಪಕ್ಷ ಹಿತದೃಷ್ಟಿಯಿಂದ, ಶಾಸಕರ ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ ಎಂದು ಡಿಕೆ ಸುರೇಶ್ ಹೇಳಿದರು.
ಅಧಿಕಾರ, ಸಿಎಂ ಹುದ್ದೆ ಯಾರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ,
ರಾಜಕೀಯದಲ್ಲಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಾಗಲಿ ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರೋದಿಲ್ಲ, ಒಲಿಯುವುದಿಲ್ಲ, ನಮ್ಮ ಅಣ್ಣನ ಹಣೆ ಬರಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ, ಸಿಎಂ ಸ್ಥಾನ ಅಷ್ಟು ಸುಲಭವಾಗಿ ಒಲಿದು ಬರುವುದಿಲ್ಲ,ಡಿಕೆ ಶಿವಕುಮಾರ್ ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಅವರ ಹಣೆಬರಹದಲ್ಲಿದ್ದರೇ ಸಿಎಂ ಆಗುತ್ತಾರೆ ಎಂದರು.
ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರರ ಎಲ್ಲಾ ದೃಷ್ಟಿಕೋನ ಇಟ್ಟುಕೊಂಡು ಚಿಂತನೆ ಮಾಡ್ತಾರೆ, ನಾನು ಶಿವಕುಮಾರ್ ದೃಷ್ಟಿಯಿಂದ ನೋಡುತ್ತೇನೆ, ಮಂತ್ರಿ ಆಗುವವರು ಅವರ ದೃಷ್ಟಿಯಿಂದ ಮಾತ್ರ ನೋಡುತ್ತಾರೆ. ಚೇರ್ಮನ್ ಆಗುವವರು ಅವರ ದೃಷ್ಟಿಕೋನದಿದ ನೋಡ್ತಾರೆ, ಆದರೆ ರಾಷ್ಟ್ರ ನಾಯಕರು ಎಲ್ಲಾ ಕೋನಗಳಿಂದ ನೋಡಬೇಕಾಗುತ್ತದೆ ಎಂದರು.
ನಮ್ಮ ಗುರಿ ಇರುವುದು 2028 ಚುನಾವಣೆ ಗುರಿ, ಶಾಸಕರ, ಪಕ್ಷ, ಕಾರ್ಯಕರ್ತರ ದೃಷ್ಟಿಯಿಂದ ತಾಳ್ಮೆಯಿಂದ ಇರಬೇಕಾಗುತ್ತದೆ, ಅವರೇ ಅಧ್ಯಕ್ಷರು ಆಗಿರುವುದರಿಂದ ಶಿಸ್ತು ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.
ತುರ್ತು ಅಧಿವೇಶನ
ಕೇಂದ್ರ ಸರ್ಕಾರದ ನಿರ್ಧಾರದಿಂದ ಕೃಷಿ, ಕೂಲಿ ಕಾರ್ಮಿಕರಿಗೆ ಅನ್ಯಾಯ ಆಗಿದೆ. ನಾವು ಅವರ ಪರವಾಗಿ ಹೋರಾಟ ಮಾಡುತ್ತೇವೆ. ಸಿಎಲ್ ಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಅಧಿವೇಶನ ಕರೆಯಲಾಗಿದೆ. ಅಲ್ಲಿ ಎಲ್ಲಾ ಶಾಸಕರು ಈ ಕುರಿತು ತೀರ್ಮಾನ ಮಾಡಲಿದ್ದಾರೆ ಎಂದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮತ್ತೆ ಬಂದರೆ ನಾನು ಅವರ ಕ್ರಮವನ್ನು ಸ್ವಾಗತ ಮಾಡುತ್ತೇನೆ, ನಾವು ಯಾರು ಹೋಗು ಎಂದಿಲ್ಲ, ಬರೋಕೆ ಬೇಡ ಎನ್ನಲ್ಲ, ಅವರ ಪಕ್ಷಕ್ಕೆ ಅವರೇ ಅಧಿಪತಿ, ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ವಿವರಿಸಿದರು.
ಆದರೂ ಕೂಡ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳ ಸಮಯವಿದೆ. ಅಲ್ಲಿಯವರೆಗೆ ನೋಡೋಣ ಏನೆಲ್ಲಾ ಬೆಳವಣಿಗೆಯಾಗುತ್ತದೆ ಎನ್ನುವುದನ್ನು ಎಂದರು.
ಜನವರಿ ಅಂತ್ಯಕ್ಕಿಲ್ಲ ಹೈಕಮಾಂಡ್ ಬುಲಾವ್
ಜನವರಿ ಅಂತ್ಯಕ್ಕೆ ದೆಹಲಿಗೆ ಹೈಕಮಾಂಡ್ ಬುಲಾವ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ, ಡಿಕೆ ಸುರೇಶ್, 29 ಕ್ಕೆ ಅಧಿವೇಶನ ಇದೆಯಲ್ಲಪ್ಪ, ಅಧಿವೇಶನ ನಡೆಯುತ್ತಿರುವಾಗ ಹೇಗೆ? ರಾಜಕಾರಣಿಗಳಿಗೆ ಬಿಡುವೇ ಇರಲ್ಲ, ರಾಜಕಾರಣಿಗಳಿಗೆ ನಿದ್ದೆ ಇರಲ್ಲ, ಊಟ ಇರಲ್ಲ, ನೆಮ್ಮದಿ ಇರಲ್ಲ, ಅಧಿಕಾರವೂ ಶಾಶ್ವತ ವಲ್ಲ, ತಾಳ್ಮೆಯೂ ಶಾಶ್ವತ ಅಲ್ಲ ಎಂದರು. ಅವರ ಈ ಮಾತು ಸಿಎಂ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಹೇಳಿದಂತಿತ್ತು.
ಎಷ್ಟು ವರ್ಷ ಕಾಯುತ್ತೀರಾ ಎಂಬ ಪ್ರಶ್ನೆಗೆ ಅವರು, ಕಾಯೋಣ ದೇವರ ಇಚ್ಛೆ, ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ, ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದು ಹೇಳಿದರು.